ಚಳಿಗಾಲದಲ್ಲಿ ಸಂಜೆಯ ವೇಳೆ ಬಿಸಿ ಬಿಸಿ ಚಹಾದೊಂದಿಗೆ ಖಾರ ಖಾರವಾಗಿ ಸವಿಯಲು ಏನಾದರೂ ಇದ್ದರೆ ಎಷ್ಟು ಚೆನ್ನ. ಅದರಲ್ಲೂ ಖಾರಾ ಮಂಡಕ್ಕಿ ಮೇಲೆ ಹಸಿ ಈರುಳ್ಳಿಯೊಂದಿಗೆ ಸವಿಯುತ್ತಾ ಬಿಸಿ ಬಿಸಿ ಚಹಾ ಸೇವಿಸುವುದರಲ್ಲಿ ಇರುವ ಖುಷಿಯೇ ಬೇರೆ. ತುಂಬಾ ಸುಲಭವಾದ ಈ ಸ್ಪೆಷಲ್ ಖಾರಾ ಮಂಡಕ್ಕಿಯನ್ನು ನೀವೂ ಒಮ್ಮೆ ಮಾಡಿನೋಡಿ.
ಬೇಕಾಗುವ ಸಾಮಗ್ರಿ:
ಮಂಡಕ್ಕಿ ಅಥವಾ ಚುರುಮುರಿ 1 ಬೌಲ್
ಅಡುಗೆ ಎಣ್ಣೆ – ಸ್ವಲ್ಪ
ಕಡಲೆ ಬೀಜ – ಸ್ವಲ್ಪ
ಕೆಂಪು ಮೆಣಸು – 2
ಕರಿಬೇವು -1 ಎಸಳು
ಅಚ್ಚ ಖಾರದ ಪುಡಿ – 1/2 ಚಮಚ
ಖಾರಾ ಸೇವ್ – 1/2 ಬೌಲ್
ಹೆಚ್ಚಿದ ಈರುಳ್ಳಿ – ಸ್ವಲ್ಪ
ಉಪ್ಪು ರುಚಿಗೆ.
ಮಾಡುವ ವಿಧಾನ:
ಬಾಣೆಲೆಗೆ ಎಣ್ಣೆ ಹಾಕಿ ಕಾದ ಬಳಿಕ ಕಡಲೆ ಬೀಜ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಕೆಂಪು ಮೆಣಸು, ಕರಿಬೇವು, ಖಾರದ ಪುಡಿ ಹಾಕಿ ತಿರುಗಿಸಿ. ಬಳಿಕ ಒಂದು ಬೌಲ್ ಮಂಡಕ್ಕಿ ಅಥವಾ ಚುರುಮುರಿ ಸೇರಿಸಿ ಗರಿ ಗರಿಯಾಗಿ ಹುರಿದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಅದಕ್ಕೆ ಖಾರ ಸೇವನ್ನೂ ಸೇರಿಸಿ ತಿರುಗಿಸಿ. ಈಗ ಗರಿ ಗರಿಯಾದ ಖಾರಾ ಮಂಡಕ್ಕಿ ಸಿದ್ಧ.
ಹೀಗೆ ರೆಡಿಯಾದ ಮಂಡಕ್ಕಿಯನ್ನು ಒಂದು ಪ್ಲೇಟ್ ಗೆ ಹಾಕಿ ಅದರ ಮೇಲೆ ಹೆಚ್ಚಿದ ಈರುಳ್ಳಿಯನ್ನು ಉದುರಿಸಿ. ಈಗ ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.