ಬೆಂಗಳೂರು: ಈಗ ಸಿಎಂ ಸ್ಥಾನ ಖಾಲಿ ಇಲ್ಲ, 2028ಕ್ಕೆ ನಾನು ಬೇಡಿಕೆ ಇಡುತ್ತೇನೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಸತೀಶ ಜಾರಕಿಹೊಳಿ ಸಿಎಂ ಆಗಬೇಕೆಂದು ವಾಲ್ಮೀಕಿ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, 2028ಕ್ಕೆ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ನಾನು ಬೇಡಿಕೆ ಇಡುತ್ತೇನೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಬೇರೆಯವರು ಕೇಳುವುದು ಅವರ ಇಷ್ಟ. ನಾನು 2028 ರಲ್ಲಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತೇನೆ. ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಹೇಳಿದ್ದಾರೆ. ಬೇರೆಯವರು ಹೇಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆ ಪರಿಸ್ಥಿತಿ ಉದ್ಭವಿಸಿಲ್ಲ. ಪಕ್ಷದ ತೀರ್ಮಾನವೇ ನನ್ನ ತೀರ್ಮಾನ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ಮೋದಿ ಟೀಕಿಸಿದ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಮೋದಿಯವರು ರಾಜಕೀಯ ಭಾಷಣ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಬಿಜೆಪಿಯಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ.