ಬೆಂಗಳೂರು: ಒಮ್ನಿ ಕಾರುಗಳಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ ಆರೋಪದಲ್ಲಿ 15ಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಆರ್.ಟಿ.ಒ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈಟ್ ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಾಲಾ ವಾಹನಗಳನ್ನು ತಡೆದ ಆರ್.ಟಿ.ಒ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನಧಿಕೃತವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಹಿನ್ನೆಲೆಯಲ್ಲಿ ಒಮ್ನಿ ಕಾರುಗಳನ್ನು ಸೀಜ್ ಮಾಡಲಾಗಿದೆ.
ಶಾಲಾ ಮಕ್ಕಳ ಸುರಕ್ಷತೆ, ಸಂಚಾರ ನಿಯಮ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯಲು ಅವಕಾಶವಿಲ್ಲ. ಶಾಲಾ ಮಕ್ಕಳನ್ನು ಪಿಕ್ ಆಂಡ್ ಡ್ರಾಪ್ ಮಾಡಲು ಕೆಲ ನಿಯಮಗಳಿವೆ. ಒಮ್ನಿ ವಾಹನದಲ್ಲಿ ಶಾಲಾ ಮಕ್ಕಳ ಪಿಕ್ ಆಂಡ್ ಡ್ರಾಪ್ ಗೆ ಅನುಮತಿ ಇಲ್ಲ. ಅಲ್ಲದೇ ಸಾರಿಗೇತರ ವಾಹನಗಳನ್ನು ಅನಧಿಕೃತವಾಗಿ ಬಳಸಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಕಾರಣಕ್ಕೆ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರ್.ಟಿ.ಒ ಜಂಟಿ ಆಯುಕ್ತೆ ಶೋಭಾ ತಿಳಿಸಿದ್ದಾರೆ.