ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಸೆರೆಲಾಕ್ ಮಕ್ಕಳಿಗೆ ಸೂಕ್ತವಲ್ಲ. ಇದರಲ್ಲಿ ಅತಿ ಹೆಚ್ಚು ಸಕ್ಕರೆ, ಉಪ್ಪು ಮತ್ತು ಕೃತಕ ಸುವಾಸನೆ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ಹಾನಿಕರ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಂಪನಿಗಳು ಪ್ಯಾಕ್ಡ್ ಫುಡ್ ಮತ್ತು ರೆಡಿಮೇಡ್ ಸೆರೆಲಾಕ್ ಅನ್ನು ಅತ್ಯಂತ ವರ್ಣರಂಜಿತ ಮತ್ತು ಆಕರ್ಷಕ ಪ್ಯಾಕೇಜಿಂಗ್‌ನಲ್ಲಿ ಬರುತ್ತವೆ. ಪೋಷಕರನ್ನು ಸುಲಭವಾಗಿ ಆಕರ್ಷಿಸುತ್ತವೆ. ಆದರೆ ಈ ಪ್ಯಾಕ್ಡ್ ಆಹಾರಗಳು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ರೆಡಿಮೇಡ್ ಸೆರೆಲಾಕ್ ಬದಲು ಮನೆಯಲ್ಲೇ ಸಿರಿಧಾನ್ಯದ ಫುಡ್ ತಯಾರಿಸಿ ತಿನ್ನಿಸಬೇಕು.
ಬೇಕಾಗುವ ಸಾಮಗ್ರಿ – ಬ್ರೌನ್ ರೈಸ್ ಅಥವಾ ವೈಟ್ ರೈಸ್ ಅರ್ಧ ಕಪ್, ದಲಿಯಾ ಅರ್ಧ ಕಪ್, ಗೋಧಿ ಕಡಿ ಅರ್ಧ ಕಪ್, ಓಟ್ಸ್ ಅರ್ಧ ಕಪ್, ತೊಗರಿ ಬೇಳೆ ಕಾಲು ಕಪ್, ಹಾರ್ಸ್ ದಾಲ್ ಕಾಲು ಕಪ್, ಕೆಂಪು ಬೇಳೆ ಕಾಲು ಕಪ್, ಹೆಸರು ಬೇಳೆ ಕಾಲು ಕಪ್, ಹುರಿದ ಕಡಲೆ ಕಾಲು ಕಪ್, ಶೇಂಗಾ ಕಾಲು ಕಪ್, ಬಾದಾಮಿ ಕಾಲು ಕಪ್, ಸ್ವಲ್ಪ ಪ್ರಮಾಣದಲ್ಲಿ ವಾಲ್‌ನಟ್ಸ್ ಹಾಗೂ ಪಿಸ್ತಾ.
ತಯಾರಿಸುವ ವಿಧಾನ – ಅಕ್ಕಿ, ಬೇಳೆ ಮತ್ತಿತರ ಡ್ರೈಫ್ರೂಟ್‌ಗಳನ್ನು ಶೋಧಿಸಿ ಚೆನ್ನಾಗಿ ತೊಳೆಯಿರಿ. ಕನಿಷ್ಠ 5-10 ಬಾರಿ ತೊಳೆಯಬೇಕು. 10 ರಿಂದ 15 ನಿಮಿಷಗಳ ಕಾಲ ನೆನೆಸಿ. ಇದರಿಂದ ಎಲ್ಲಾ ಪಿಷ್ಟವನ್ನು ತೆಗೆದುಹಾಕಬಹುದು.
ಬಳಿಕ ನೀರನ್ನು ಸೋಸಿಕೊಂಡು ಹತ್ತಿ ಬಟ್ಟೆಯ ಮೇಲೆ ಹಾಕಿ ಚೆನ್ನಾಗಿ ಒಣಗಿಸಿ. ಒಣಗಿದ ಬಳಿಕ ಇವನ್ನೆಲ್ಲ ಡ್ರೈರೋಸ್ಟ್ ಮಾಡಿಕೊಳ್ಳಿ. ಇವುಗಳನ್ನೆಲ್ಲ ಪ್ರತ್ಯೇಕವಾಗಿ ಹುರಿಯಬೇಕು. ಹುರಿದ ನಂತರ ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಬೇಕು. ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಅದನ್ನು ಜರಡಿ ಹಿಡಿದರೆ ಮಗುವಿನ ಹೋಮ್ ಮೇಡ್ ಸೆರೆಲಾಕ್ ಸಿದ್ಧವಾಗುತ್ತದೆ.
ಉಪ್ಪು ಅಥವಾ ಸಕ್ಕರೆ ಬೆರೆಸದೇ ಈ ಸೆರೆಲಾಕ್ ಅನ್ನು ತಿನ್ನಿಸಬಹುದು. ಇದು ನೈಸರ್ಗಿಕ ರುಚಿಯನ್ನು ಹೊಂದಿರುತ್ತದೆ. ಮಗುವಿಗೆ ಎಲ್ಲಾ ಡ್ರೈಫ್ರೂಟ್, ಬೇಳೆಕಾಳುಗಳು ಮತ್ತು ಅಕ್ಕಿಯಲ್ಲಿರುವ ಪೋಷಕಾಂಶ ಸಿಕ್ಕಿದಂತಾಗುತ್ತದೆ. ಒಟ್ಟಿಗೆ ತಯಾರಿಸಿ ಒಂದು ತಿಂಗಳ ಕಾಲ ಏರ್ ಟೈಟ್ ಡಬ್ಬದಲ್ಲಿ ಇದನ್ನು ಇಡಬಹುದು. ಸ್ವಲ್ಪ ನೀರಿನಲ್ಲಿ ಬೇಯಿಸಿ ಮಗುವಿಗೆ ತಿನ್ನಿಸಬಹುದು.