ಮುಂಬೈ: ಹಳೆ ಪಿಂಚಣಿ ಪದ್ಧತಿಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಭರಿಸಲಾಗದ ಸಾಲದ ಪ್ರಮಾಣವು ಹೆಚ್ಚಾಗುತ್ತದೆ ಎಂದು ಆರ್‌ಬಿಐ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಹೊಸ ಪಿಂಚಣಿ ಪದ್ಧತಿ ಕೈ ಬಿಟ್ಟು ಹಳೆ ಪಿಂಚಣಿ ಪದ್ಧತಿ ಜಾರಿಗೆ ತರುವುದನ್ನು ಮತ್ತೆ ವಿರೋಧಿಸಿರುವ ಆರ್ಬಿಐ ಇಂತಹ ಕ್ರಮಗಳಿಂದ ರಾಜ್ಯಗಳ ಹಣಕಾಸು ಹೊರೆ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಕಾಂಗ್ರೆಸ್ ಆಡಳಿತದ ಛತ್ತೀಸ್ಗಢ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್ ಹಾಗೂ ಆಮ್ ಅದ್ಮಿ ಪಕ್ಷದ ಆಡಳಿತವಿರುವ ಪಂಜಾಬ್ ನಲ್ಲಿ ಹೊಸ ಪಿಂಚಣಿ ಪದ್ಧತಿ ಕೈ ಬಿಟ್ಟು ಹಳೆ ಪಿಂಚಣಿ ಪದ್ಧತಿ ಜಾರಿಗೆ ತರಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯಗಳ ಹಣಕಾಸು ಸ್ಥಿತಿ 2022- 23 ಬಜೆಟ್ ಗಳ ಅಧ್ಯಯನ ವರದಿಯಲ್ಲಿ ಪ್ರಸ್ತಾಪಿಸಿದ್ದು, ಹಳೆ ಪಿಂಚಣಿ ಪದ್ಧತಿ ಜಾರಿ ಮಾಡುವುದರಿಂದ ಮುಂದೆ ಕಟ್ಟಲಾಗದ ಸಾಲದ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸಿದೆ.
ರಾಷ್ಟ್ರೀಯ ಪಿಂಚಣಿ ಪದ್ಧತಿ ಅನ್ವಯ ಮೂಲವೇತನದ ಶೇ. 10 ರಷ್ಟನ್ನು ಕೇಂದ್ರ ಸರ್ಕಾರ ತನ್ನ ಪಾಲಿನ ರೂಪದಲ್ಲಿ ಪಿಂಚಣಿಗೆ ನೀಡುತ್ತದೆ. ರಾಜ್ಯ ಸರ್ಕಾರ ಶೇಕಡ 14ರಷ್ಟು ಪಾಲು ನೀಡುತ್ತದೆ. ಹಳೆ ಪಿಂಚಣಿ ಪದ್ಧತಿ ಪ್ರಕಾರ ಶೇಕಡ 50ರಷ್ಟು ವೇತನ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಹಳೆಯ ಪಿಂಚಣಿ ಪದ್ಧತಿಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಇದರೊಂದಿಗೆ ಭರಿಸಲಾಗದ ಸಾಲದ ಪ್ರಮಾಣವು ಹೆಚ್ಚುತ್ತದೆ ಎಂದು ಆರ್‌ಬಿಐ ಎಚ್ಚರಿಸಿದೆ.