ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜತೆಗೆ ಸಕ್ಕರೆ, ತೊಗರಿ ಬೇಳೆ ಸೇರಿ ಇತರೆ ಧಾನ್ಯಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ.
ಈ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ವಿತರಿಸುವ ಪಡಿತರ ಪ್ರಮಾಣ ಹೆಚ್ಚಳ ಮಾಡಿದ್ದರು. ದೈನಂದಿನ ವಸ್ತುಗಳ ಮಾರಾಟಕ್ಕೂ ಅವಕಾಶ ನೀಡಿದ್ದರು. ಅದೇ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಬೇಕು ಎಂದು ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಅಡಿ ಕೇಂದ್ರ ಸರ್ಕಾರ 5 ಕೆಜಿ, ರಾಜ್ಯದಿಂದ ಒಂದು ಕೆಜಿ ಸೇರಿ ಒಟ್ಟು ಆರು ಕೆಜಿ ಅಕ್ಕಿಯನ್ನು ಬಿಪಿಎಲ್ ಸದಸ್ಯನಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತ್ಯೇಕವಾಗಿ ಪ್ರತಿ ಬಿಪಿಎಲ್ ಸದಸ್ಯನಿಗೆ ಐದು ಕೆಜಿ ಅಕ್ಕಿ ನೀಡಬೇಕಿದೆ. ಯೋಜನೆ ಜಾರಿಗೆ ನಮ್ಮ ಸಂಪೂರ್ಣ ಸಹಕಾರವಿದ್ದು, 10 ಕೆಜಿ ಅಕ್ಕಿ ವಿತರಣೆಗೆ ಸಿದ್ಧವಾಗಿದ್ದೇವೆ. ಅಕ್ಕಿ ಜತೆಗೆ ಬೇರೆ ಧಾನ್ಯಗಳನ್ನು ವಿತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇ- ಕೆವೈಸಿ ಹಣ ಹಾಗೂ ಪಡಿತರ ವಿತರಣೆಗೆ ನೀಡುವ ಕಮಿಷನ್ ಸೇರಿ ಬಾಕಿ ಉಳಿದಿರುವ ಒಟ್ಟು 90 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.