ಮುಂಬೈ: ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಗುರುವಾರ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಹೆಸರಾಂತ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾದ ಟಾಟಾ ಅವರು ಬುಧವಾರ ಮುಂಬೈ ಆಸ್ಪತ್ರೆಯಲ್ಲಿ 86 ನೇ ವಯಸ್ಸಿನಲ್ಲಿ ನಿಧನರಾದರು.
ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಅಕ್ಟೋಬರ್ 10 ರಂದು ಶೋಕಾಚರಣೆಯ ಸಂಕೇತವಾಗಿ ಅರ್ಧಕ್ಕೆ ಹಾರಿಸಲಾಗುವುದು. ಗುರುವಾರ ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ದಕ್ಷಿಣ ಮುಂಬೈನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್(ಎನ್‌ಸಿಪಿಎ) ನಲ್ಲಿ ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಟಾಟಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ, ಗೌರವ ಸಲ್ಲಿಸಿದ ನಂತರ ಮುಂಬೈನ ವರ್ಲಿ ಪ್ರದೇಶದಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ.
ಪದ್ಮವಿಭೂಷಣ ಪುರಸ್ಕೃತರಾಗಿದ್ದ ಅವರು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರಾತ್ರಿ 11.30ಕ್ಕೆ ಕೊನೆಯುಸಿರೆಳೆದರು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.