ಮಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ತನಿಖೆ ಚುರುಕುಗೊಳಿಸಿದೆ. ಪ್ರಕರಣದ ಹಿಂದೆ ಐಸಿಸ್ ಉಗ್ರರ ನಂಟಿರುವ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. ಶಂಕಿತರು ಪರಾರಿಯಾಗಲು ಸಮುದ್ರ ಮಾರ್ಗವನ್ನು ಬಳಕೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದ ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಎನ್ ಐಎ ಸೂಚನೆ ಮೇರೆಗೆ ಮಂಗಳೂರು ಕರಾವಳಿ ಕಾವಲು ಪಡೆ ಪ್ರತಿ ಬೋಟ್, ದೋಣಿಗಳನ್ನು ತಪಾಸಣೆ ನಡೆಸುತ್ತಿದೆ. ಸಮುದ್ರ ಮಾರ್ಗವಾಗಿ ಶಂಕಿತರು ಪರಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಸಮುದ್ರ ತೀರಗಳಲ್ಲಿ ತಪಾಸಣೆ ತೀವ್ರಗೊಂಡಿದೆ.
ರಾಮೇಶ್ವರಂ ಕೆಫೆ ಬಾಂಬರ್ ಬಸ್ ಮೂಲಕ ಬಳ್ಳಾರಿಗೆ ತೆರಳಿರುವ ಶಂಕೆ ಇದ್ದು, ಬಳ್ಳಾರಿ ಬಸ್ ನಿಲ್ದಾಣದಲ್ಲಿ ಓಡಾಡಿರುವ ಸಿಸಿಟಿವಿ ದೃಶ್ಯಗಳನ್ನು ಎನ್ ಐಎ ಕಳೆದ ದಿನ ಬಿಡುಗಡೆ ಮಾಡಿತ್ತು. ಆಟೋ ಮೂಲಕ ಕೌಲ್ ಬಜಾರ್ ಗೆ ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಸಮುದ್ರ ತೀರಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.