ಉಡುಪಿ: ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುವ ದೇವಾಲಯಗಳು ಉಸ್ತುವಾರಿಗೆ ಪ್ರಾಧಿಕಾರ ರಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಭಕ್ತರು ಭೇಟಿ ನೀಡುವ ಮೈಸೂರಿನ ಚಾಮುಂಡೇಶ್ವರಿ, ಕೊಪ್ಪಳದ ಹುಲಿಗೆಮ್ಮ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳ ಉಸ್ತುವಾರಿಗೆ ಪ್ರಾಧಿಕಾರ ರಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಮುಜರಾಯಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೆ ಮಾಡಲು ಕಂದಾಯ ಇಲಾಖೆಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ. ಆಸ್ತಿಗಳು ಪರಭಾರೆ ಅಥವಾ ಒತ್ತುವರಿ ಆಗಿದ್ದರೆ ಇಲಾಖೆಗೆ ಹಿಂಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಮುಜರಾಯಿ ದೇವಾಲಯಗಳ ಎ, ಬಿ ದರ್ಜೆಯ ನೌಕರರ ಹೊರತುಪಡಿಸಿ ಉಳಿದವರನ್ನು ಇಲಾಖೆ ಇತರ ದೇವಾಲಯಗಳಿಗೆ ಅಂತರ್ ವರ್ಗಾವಣೆ ಮಾಡುವ ಪ್ರಸ್ತಾಪ ಇಲ್ಲ. ನೌಕರರ ಮೇಲೆ ನಿರ್ದಿಷ್ಟ ದೂರು ಬಂದಲ್ಲಿ ತನಿಖೆ ನಡೆಸಿ ವರ್ಗಾವಣೆ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.