ಶರತ್ ಬಾಬು ನನಗೆ ಯಾವಾಗಲೂ ಸಿಗರೇಟ್ ತ್ಯಜಿಸುವಂತೆ ಸಲಹೆ ನೀಡುತ್ತಿದ್ದರೆಂದು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಸ್ನೇಹಿತ- ನಟ ಶರತ್ ಬಾಬು ಅವರನ್ನು ಸ್ಮರಿಸಿದ್ದಾರೆ.
ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಜನಿಕಾಂತ್ ತಮ್ಮ ಹಾಗು ಶರತ್ ಬಾಬು ನಡುವಿನ ಸ್ನೇಹವನ್ನ ನೆನಪಿಸಿಕೊಂಡರು. ನಾನು ಸಿಗರೇಟ್ ಸೇದುತ್ತಿದ್ದಾಗ ಅದನ್ನ ಶರತ್ ಬಾಬು ಕಿತ್ತು ಎಸೆಯುತ್ತಿದ್ದರು. ಹಾಗಾಗಿ ನಾನು ಅವರ ಮುಂದೆ ಧೂಮಪಾನ ಮಾಡುತ್ತಿರಲಿಲ್ಲ ಎಂದು ನಟನ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ರಜನಿಕಾಂತ್ ಹೇಳಿದರು.
71 ವರ್ಷದ ಶರತ್ ಬಾಬು ಅವರು ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾಗ ಹೈದರಾಬಾದ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ನಂತರ ಅವರ ಪಾರ್ಥಿವ ಶರೀರವನ್ನು ಚೆನ್ನೈಗೆ ಅಂತ್ಯಕ್ರಿಯೆಗಾಗಿ ತರಲಾಯಿತು.
ನಟನಾಗುವ ಮೊದಲೇ ಶರತ್ ಬಾಬು ಅವರನ್ನು ರಜನಿಕಾಂತ್ ಬಲ್ಲವರಾಗಿದ್ದರು. ಅವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ದಿವಂಗತ ನಟ ಶರತ್ ಬಾಬು ತುಂಬಾ ಒಳ್ಳೆಯ ಮನುಷ್ಯ, ಒಳ್ಳೆಯ ಸ್ನೇಹಿತ ಮತ್ತು ಅವರ ಮುಖದಲ್ಲಿ ಯಾವಾಗಲೂ ನಗು ಇರುತಿತ್ತು . ಅವರು ಗಂಭೀರವಾಗಿದ್ದುದನ್ನ ಅಥವಾ ಕೋಪಗೊಂಡಿದ್ದನ್ನ ನಾನು ಎಂದಿಗೂ ನೋಡಿಲ್ಲ. ನಾನು ಅವರೊಂದಿಗೆ ನಟಿಸಿದ ಎಲ್ಲಾ ಚಿತ್ರಗಳು ಬಹು ದೊಡ್ಡ ಹಿಟ್ ಆಗಿವೆ. ಅವರು ನನ್ನ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು . ನನ್ನ ಧೂಮಪಾನ ಅಭ್ಯಾಸದ ಬಗ್ಗೆ ಅವರು ಯಾವಾಗಲೂ ಚಿಂತಿಸುತ್ತಿದ್ದರು. ನನ್ನ ದೀರ್ಘಾಯುಷ್ಯಕ್ಕೆ ಸಿಗರೇಟ್ ಸೇದುವುದನ್ನು ಬಿಡುವಂತೆ ಸಲಹೆ ನೀಡುತ್ತಿದ್ದರು ಎಂದು ರಜನಿಕಾಂತ್ ಸ್ಮರಿಸಿದರು.
ಅಣ್ಣಾಮಲೈ ಚಿತ್ರದಂತೆ ನಿರೀಕ್ಷೆಯಂತೆ ಪ್ರಮುಖ ದೃಶ್ಯವೊಂದು ಬರಲಿಲ್ಲ. ನಾನು ಸಾಕಷ್ಟು ರಿಟೇಕ್ ತೆಗೆದುಕೊಳ್ಳುತ್ತಿದ್ದೆ. ಆಗ ಶರತ್ ಬಾಬು, ನನಗೆ ಸಿಗರೇಟ್ ತಂದು ಕೊಟ್ಟಿದ್ದರು. ಆನಂತರ ರಿಲ್ಯಾಕ್ಸ್ ಆದ ನಾನು ನಿರಾಳನಾಗಿದ್ದೆ, ಆನಂತರ ಟೇಕ್ ಓಕೆ ಆಯಿತು ಎಂದು ಸ್ಮರಿಸಿದರು.
ನಟರಾದ ಸೂರ್ಯ, ಕಾರ್ತಿ, ಸುಹಾಸಿನಿ ಸೇರಿದಂತೆ ಹಲವಾರು ತಮಿಳು ಚಿತ್ರರಂಗದ ಗಣ್ಯರು ಶರತ್ ಬಾಬು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.