ರಾಯಚೂರು: ಬೀದಿ ನಾಯಿಗಳ ದಾಳಿಯಿಂದ ಪುಟ್ಟ ಮಕ್ಕಳು, ಹಿರಿಯರು ರೋಸಿ ಹೋಗಿದ್ದ ಪ್ರಕರಣಗಳ ಬೆನ್ನಲ್ಲೇ ಇದೀಗ ರಾಯಚೂರಿನಲ್ಲಿ ಹಂದಿ ದಾಳಿ ಆರಂಭವಾಗಿದೆ. ಆಟವಾಡುತ್ತಿದ್ದ ಬಾಲಕಿ ಮೇಲೆ ಹಂದಿ ಡೆಡ್ಲಿ ಅಟ್ಯಾಕ್ ಮಾಡಿದ್ದು, ಬಾಲಕಿ ಸ್ಥಿತಿ ಗಂಭೀರವಾಗಿದೆ.
ಕೆಲ ದಿನಗಳ ಹಿಂದೆ ರಾಯಚೂರು ಜಿಲ್ಲೆ ಸಿಂದನೂರು ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ಮಕ್ಕಳು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ನಾಯಿ ದಾಳಿ ಪ್ರಕರಣ ಮಾಸುವ ಮುನ್ನವೇ ರಾಯಚೂರು ನಗರದ ಅರಬ್ ಮೊಹಲ್ಲಾ ಏರಿಯಾದಲ್ಲಿ ಪುಟ್ಟ ಬಾಲಕಿ ಮೇಲೆ ಹಂದಿಗಳು ದಾಳಿ ನಡೆಸಿವೆ.
6 ವರ್ಷದ ಮುದ್ದಮ್ಮ ಎಂಬ ಬಾಲಕಿ ಮೇಲೆ ಹಂದಿ ದಾಳಿ ನಡೆಸಿ, ಬಾಲಕಿಯನ್ನು ಎಳೆದಾಡಿ, ಕಚ್ಚಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯ ಮುಖ, ಕೈಕಾಲು, ಬೆನ್ನು ಗಂಟಲಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಂದಿ ದಾಳಿಯಿಂದ ಮಗು ಸ್ಥಿತಿ ಗಂಭೀರವಾಗಿದ್ದರೂ ಈವರೆಗೂ ನಗರಸಭೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಹಂದಿ ಹಿಡಿಯುವ ಪ್ರಯತ್ನ ನಡೆಸಿಲ್ಲ. ಅರಬ್ ಮೊಹಲ್ಲಾ ಏರಿಯಾದಲ್ಲಿ ಮಕ್ಕಳು, ಸಾರ್ವಜನಿಕರು ಹಂದಿ ದಾಳಿಗೆ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.