ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಮ್ಮ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಟ್ರಕ್ ಗಳಲ್ಲಿ ಅವರ ಮನೆಯ ವಸ್ತುಗಳನ್ನು ಅವರ ತಾಯಿ ಸೋನಿಯಾ ಗಾಂಧಿಯವರ 10 ಜನಪಥ್ ನಿವಾಸಕ್ಕೆ ಕೊಂಡೊಯ್ಯಲಾಗಿದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದ ಆದೇಶದ ಮೇರೆಗೆ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಏಪ್ರಿಲ್ 22 ರೊಳಗೆ ರಾಹುಲ್ ಗಾಂಧಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ಕಳುಹಿಸಿದ ನಂತರ ಬಂಗಲೆಯನ್ನು ಖಾಲಿ ಮಾಡುತ್ತಿದ್ದಾರೆ.
ಮಾನನಷ್ಟ ಮೊಕದ್ದಮೆಯಲ್ಲಿನ ಶಿಕ್ಷೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ಕುರಿತು ಏಪ್ರಿಲ್ 20 ರಂದು ಆದೇಶವನ್ನು ಪ್ರಕಟಿಸಲು ಸೂರತ್ ಸೆಷನ್ಸ್ ಕೋರ್ಟ್ ನಿರ್ಧರಿಸಿದ ಒಂದು ದಿನದ ನಂತರ ಬಂಗಲೆಯನ್ನು ಖಾಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಿದ್ದ ಕಾಂಗ್ರೆಸ್ ನಾಯಕನಿಗೆ ನ್ಯಾಯಾಲಯ ಏಪ್ರಿಲ್ 3 ರಂದು ಜಾಮೀನು ನೀಡಿತ್ತು. ರಾಹುಲ್ ಗಾಂಧಿ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅವರ ಕಚೇರಿಯು ಮತ್ತೊಂದು ಮನೆಗಾಗಿ ಹುಡುಕಾಟ ನಡೆಸುತ್ತಿದೆ. Z + ಭದ್ರತೆ ಇರುವುದರಿಂದ ಭದ್ರತಾ ಸಂಸ್ಥೆಗಳಿಂದ ಗ್ರೀನ್ ಸಿಗ್ನಲ್ ಪಡೆದ ನಂತರ ಅಂತಿಮಗೊಳಿಸಲಾಗುವುದು ಎಂದು ಹೇಳಲಾಗಿದೆ.