ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಳೆದ ಒಂದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಸುತ್ತಿಲ್ಲ. ಬರೀ ಲೂಟಿ ಮಾಡುವುದೇ ಸರ್ಕಾರದ ಕೆಲಸವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್, ವಾಲ್ಮೀಕಿ ನಿಗದ ಹಗರಣ, ಮೂಡಾ ಹಗರಣ ಎರಡೂ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆಗಳು. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಕಾಂಗ್ರೆಸ್ ಬಂದ ಮೇಲೆ ಹಗರಣಗಳ ಮೇಲೆ ಹಗರಣ ನಡೆಯುತ್ತಿವೆ. ಲೂಟಿ ಮಾಡುವುದೇ ಸರ್ಕಾರದ ಕೆಲಸವಾಗಿದೆ ಎಂದು ಕಿಡಿಕಾರಿದರು.
ಸರ್ಕಾರದ ಆಡಳಿತ ವೈಖರಿ ಖಂಡಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದರೆ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರತಿಭಟಿಸಿದವರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರನ್ನು ಅವರ ಮನೆ ಬಳಿಯೇ ಬಂಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲಸವಾಗುತ್ತಿದೆ. ಕರ್ನಾಟಕದ ಕಾಂಗ್ರೆಸ್ ತುರ್ತುಪರಿಸ್ಥಿತಿ ಜಾರಿಗೊಳಿಸಿದೆ ಎಂದು ಕಿಡಿಕಾರಿದರು.