ಇತ್ತೀಚಿನ ದಿನಗಳಲ್ಲಿ ವಯಸ್ಕರು ಮಾತ್ರವಲ್ಲದೆ ಯುವ ಜನತೆ ಕೂಡ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಈ ಹಿಂದೆ ಖ್ಯಾತ ನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ವಿಧಿವಶರಾದ ಸಂದರ್ಭದಲ್ಲಿ ಅವರ ಹೆಸರಿನಲ್ಲಿಯೇ ಆರೋಗ್ಯ ಇಲಾಖೆ, ಹೃದಯ ಚಿಕಿತ್ಸೆಗೆ ಯೋಜನೆಯೊಂದನ್ನು ರೂಪಿಸಿತ್ತು.
ಇದರಡಿ ಹೃದಯ ಸ್ನಾಯುವಿನ ಸೋಂಕು ನಿವಾರಣೆ ಯೋಜನೆಯನ್ನು ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳು ಸೇರಿ 45 ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಕಾರ್ಯಗತಗೊಳಿಸಲಾಗಿದ್ದು, ಇದು ಯಶಸ್ವಿಯಾಗಿರುವ ಬೆನ್ನಲ್ಲೇ ಇದೀಗ ರಾಜ್ಯದಾದ್ಯಂತ ಶೀಘ್ರದಲ್ಲಿಯೇ ಈ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವು ತಡೆಯುವ ಸಲುವಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಟೋಮೇಟೆಡ್ ಎಕ್ಸ್ಟರ್ನಲ್ ಡಿಫೈ ಬ್ರಿಲೇಟರ್ಸ್ (ಎಇಡಿ) ಎಂಬ ಸಾಧನವನ್ನು ಅಳವಡಿಸಲಾಗುತ್ತಿದ್ದು, ಈ ಸಾಧನ ನಿಂತು ಹೋದ ಎದೆ ಬಡಿತವನ್ನು ಪುನರಾರಂಭಿಸಲು ಸಹಕಾರಿಯಾಗಲಿದೆ ಎನ್ನಲಾಗಿದೆ.
ಹಠಾತ್ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) ಅಗತ್ಯ ಚಿಕಿತ್ಸೆ ಒದಗಿಸಿದರೆ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದಾಗಿದ್ದು, ಹೀಗಾಗಿಯೇ ಆರೋಗ್ಯ ಇಲಾಖೆ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಈ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೊಳಿಸಲು ಮುಂದಾಗಿದೆ.