
ಮುಂಬೈ: ಅಪ್ರಾಪ್ತ ವಯಸ್ಸಿನ ಇಬ್ಬರು ಸೋದರಿಯರನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪುಣೆಯ ರಾಜಗುರುನಗರ ಪ್ರದೇಶದಲ್ಲಿ ಅಜಯ್ ದಾಸ್(54) ಎಂಬಾತ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಮನೆಯ ಹೊರಗೆ ಆಟವಾಡುತ್ತಿದ್ದ 8 ಮತ್ತು 9 ವರ್ಷದ ಇಬ್ಬರೂ ಸಹೋದರಿಯರು ನಾಪತ್ತೆಯಾಗಿದ್ದರು. ಪೋಷಕರು ಹುಡುಕಾಟ ನಡೆಸಿದ್ದು ಮಕ್ಕಳು ಕಾಣಿಸದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾಕರ್ ಮೋರೆ ಕಾಣೆಯಾದ ಇಬ್ಬರು ಸಹೋದರಿಯರ ಪತ್ತೆಗೆ ತಂಡಗಳನ್ನು ರಚಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ ಯಾವುದೇ ಸುಳಿವು ದೊರೆತಿಲ್ಲ. ನಿರಂತರ ಹುಡುಕಾಟ ನಡೆಸಿದಾಗ ನೀರು ತುಂಬಿದ್ದ ಡ್ರಂನಲ್ಲಿ ಬಾಲಕಿಯರ ಮೃತ ದೇಹಗಳು ಪತ್ತೆಯಾಗಿವೆ.
ಬಾಣಸಿಗ ಅಜಯ್ ದಾಸ್ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸಗಿ ಡ್ರಂ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದು ಪತ್ತೆಯಾಗಿದೆ. ಘಟನೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಖೇಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳಾ ತನಿಖಾ ಅಧಿಕಾರಿ ಸ್ನೇಹಲ್ ರಾಜೇ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಪುಣೆಯ ಸಾಸೂನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.