ಬೆಂಗಳೂರು: ಪಿಎಸ್ಐ, ಸಿಟಿಐ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿದೆ. ಇಂಟಲಿಜೆನ್ಸ್ ವಿಭಾಗದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ಲಿಂಗಯ್ಯ ಅವರು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆ ಎದುರು ನೂರಾರು ಅಭ್ಯರ್ಥಿಗಳು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಹಣಕ್ಕೆ ಬೇಡಿಕೆ, ಪರೀಕ್ಷೆ ವಿಚಾರವಾಗಿ ಡೀಲ್ ನಡೆಸುವ ಬಗ್ಗೆ ಎಸ್ಐ ಲಿಂಗಯ್ಯ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮತ್ತು ವಾಟ್ಸಾಪ್ ಚಾಟ್ ವೈರಲ್ ಆಗಿದ್ದು, ಇದನ್ನು ಆಧರಿಸಿ ಚಂದ್ರಾ ಲೇಔಟ್ ಠಾಣೆಗೆ ಪರೀಕ್ಷಾರ್ಥಿಗಳು ದೂರು ನೀಡಿದ್ದಾರೆ.
ಸಿಸಿಬಿ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜನವರಿ 21ರಂದು ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಪರೀಕ್ಷೆ ಇದೆ. ಜನವರಿ 23ರಂದು ಪಿಎಸ್ಐ ಪರೀಕ್ಷೆ ನಡೆಯಲಿದೆ. ಈ ಎರಡು ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸಿದ್ದು, ಒಂದು ಹುದ್ದೆಗೆ 80 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.