ಬೆಂಗಳೂರು: ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಿದ್ದು, ಸರಾಸರಿ ಶೇಕಡ 30ರಷ್ಟು ಆಸ್ತಿ ಮೌಲ್ಯ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಆಸ್ತಿಗಳ ಸರ್ಕಾರಿ ಮಾರ್ಗಸೂಚಿ ದರಕ್ಕೂ, ಮಾರುಕಟ್ಟೆ ವಾಸ್ತವಿಕ ಮೌಲ್ಯಕ್ಕೂ ಭಾರಿ ವ್ಯತ್ಯಾಸವಿದ್ದು, ರೈತರು, ಇತರೆ ಆಸ್ತಿ ಮಾಲೀಕರು, ಭೂಸ್ವಾಧೀನ ಸಂತ್ರಸ್ತ ರೈತರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ, ಕಪ್ಪು ಹಣ ವಹಿವಾಟಿಗೆ ಉತ್ತೇಜನ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಆಸ್ತಿಗಳ ಮೌಲ್ಯ ಪರಿಷ್ಕರಣೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 5 ವರ್ಷಗಳಿಂದ ಆಸ್ತಿ ಮೌಲ್ಯ ಪರಿಷ್ಕರಣೆ ಆಗಿಲ್ಲ. ಕಂದಾಯ ಇಲಾಖೆ ನಿಯಮಗಳ ಪ್ರಕಾರ ಪ್ರತಿವರ್ಷ ಆಸ್ತಿಗಳ ಮೌಲ್ಯ ಪರಿಷ್ಕರಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಸರಾಸರಿ ಶೇಕಡ 30ರಷ್ಟು ಆಸ್ತಿ ಮೌಲ್ಯ ಪರಿಷ್ಕರಣೆಗೆ ತೀರ್ಮಾನಿಸಲಾಗಿದೆ. ಹೆಚ್ಚು ಮೌಲ್ಯ ನಿಗದಿಗೊಳಿಸಿರುವುದು ಪರಿಷ್ಕರಣೆ ವೇಳೆ ಕಂಡು ಬಂದಲ್ಲಿ ಅಂತಹವುಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಆಸ್ತಿ ಮೌಲ್ಯ ಪರಿಷ್ಕರಿಸಲು ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.