ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜಾರಿಗೊಳಿಸಿರುವ ಶಕ್ತಿ ಯೋಜನೆ ಖಾಸಗಿ ಬಸ್ ಗಳಿಗೂ ವಿಸ್ತರಿಸಲು ಇಂದು ಮಹತ್ವದ ಚರ್ಚೆ ನಡೆಸಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಖಾಸಗಿ ಸಾರಿಗೆ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ.
ಸಾರಿಗೆ ಸಂಘಟನೆಗಳ ಜೊತೆಗಿನ ಸಭೆಯ ನಡೆಸಿದ ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಅನೇಕ ವಿಚಾರಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ. ಆಟೋ, ಕ್ಯಾಬ್ ಗಳಿಗೆ ಪ್ರತ್ಯೇಕ ಅಪ್ಲಿಕೇಶನ್ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಖಾಸಗಿ ಬಸ್ ಗಳನ್ನು ಶಕ್ತಿ ಯೋಜನೆಗೆ ಸೇರಿಸಿ ಎಂದು ಬಸ್ ಮಾಲೀಕರು ಕೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಸುರೇಶ್ ನಾಯ್ಕ್ ಅವರು, ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆ ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ತಮಿಳುನಾಡು ಮಾದರಿ ಅಳವಡಿಸಲು ಮನವಿ ಮಾಡಲಾಗಿದೆ. ರಾಜ್ಯದ 17 ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳು ಸಂಚಾರ ಮಾಡುತ್ತಿವೆ. ಸ್ಮಾರ್ಟ್ ಕಾರ್ಡ್ ಮೂಲಕ ಖಾಸಗಿ ಬಸ್ ಗಳಿಗೆ ಶಕ್ತಿ ಯೋಜನೆ ಸೇರಿಸಿ ಎಂದು ಸಿಎಂಗೆ ಮನವಿ ಮಾಡಿದ್ದು, ಆಗಸ್ಟ್ 30 ರಂದು ಈ ಬಗ್ಗೆ ತಿಳಿಯಲಿದೆ ಎಂದು ಸುರೇಶ್ ನಾಯ್ಕ್ ಹೇಳಿದ್ದಾರೆ.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಹಳೆಯ ಲಾರಿಗಳಿಗೂ ಕೂಡ ಟ್ಯಾಕ್ಸ್ ಕಟ್ಟಬೇಕಿದೆ. ಲಾರಿಗೆ ತೆರಿಗೆ ವಿಧಿಸಿದ್ದನ್ನು ತೆಗೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ನಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೈಸ್ ರಸ್ತೆಯಲ್ಲಿ ಲಾರಿ ಮಾಲೀಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.