ಭೋಪಾಲ್: ಮಧ್ಯ ಪ್ರದೇಶದಲ್ಲಿ ಯುವತಿಯರಿಗೆ ಮದುವೆ ಮುಂಚೆ ಗರ್ಭಧಾರಣೆ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಕನ್ಯಾದಾನ ಯೋಜನೆ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕನ್ಯಾದಾನ ಯೋಜನೆಗೆ ಅರ್ಜಿ ಸಲ್ಲಿಸಿದ ಯುವತಿಯರಿಗೆ ಗರ್ಭಧಾರಣೆ ಪರೀಕ್ಷೆ ನಡೆಸುವುದು ಅಕ್ಷಮ್ಯವಾಗಿದ್ದು, ಮಹಿಳಾ ಕುಲಕ್ಕೆ ಮಾಡುವ ಅವಮಾನವಾಗಿದೆ. ಸರ್ಕಾರ ಯೋಜನೆಗೆ ಆಯ್ಕೆಯಾಗಲು ಗರ್ಭಧಾರಣೆ ಪರೀಕ್ಷೆ ಕಡ್ಡಾಯ ಮಾಡಿದೆಯೇ ಎಂಬುದನ್ನು ಬಹಿರಂಗಪಡಿಸಬೇಕೆಂದು ಕಾಂಗ್ರೆಸ್ ಶಾಸಕ ಓಂಕಾರ್ ಮಾರ್ಕಮ್ ಒತ್ತಾಯಿಸಿದ್ದಾರೆ.
ಆದರೆ ಇದನ್ನು ಒಪ್ಪದ ಬಿಜೆಪಿ ಅಲ್ಲಗಳೆದಿದ್ದು, ಸರ್ಕಾರದ ಯೋಜನೆಯ ಲಾಭ ಪಡೆಯಲು ಕೆಲವರು ಮದುವೆಯಾಗಿದ್ದರೂ ಅರ್ಜಿ ಸಲ್ಲಿಸಿದ್ದಾರೆ. ಸಾಮೂಹಿಕ ವಿವಾಹದ ವೇಳೆ ಕೆಲವರು ಗರ್ಭಿಣಿಯರಾಗಿರುವುದು ಕಂಡುಬಂದಿದ್ದು, ಈ ಕಾರಣದಿಂದ ಗರ್ಭಧಾರಣೆ ಪರೀಕ್ಷೆ ನಡೆಸಲಾಗಿದೆ. ಕಾಂಗ್ರೆಸ್ ನವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ದಿಂಡೋರಿ ಜಿಲ್ಲೆಯ ಗಡರಸರೈ ನಲ್ಲಿ ಕನ್ಯಾದಾನ ಯೋಜನೆಗೆ 219 ಜೋಡಿ ಮದುವೆಗೆ ನೋಂದಣಿ ಮಾಡಿಕೊಂಡಿದ್ದು, ಗರ್ಭಧಾರಣೆ ಪರೀಕ್ಷೆಯಲ್ಲಿ ಗರ್ಭಿಣಿಯಾಗಿರುವುದು ದೃಢಪಟ್ಟ ನಂತರ ಕೆಲವು ಯುವತಿಯರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮದುವೆಗೆ ಮೊದಲು ಗರ್ಭಧಾರಣೆ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಪ್ರತಿಪಕ್ಷಗಳು ಹೇಳಿವೆ.
ಮುಖ್ಯಮಂತ್ರಿ ಕನ್ಯಾದಾನ ಯೋಜನೆ ಅಡಿ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ 55 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಮದುವೆಯಾದವರು ಕೂಡ ಯೋಜನೆಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಕಾರಣಕ್ಕೆ ಗರ್ಭಧಾರಣೆ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದೆ.