ರಾಯಚೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘತದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರ, ಸಣ್ಣ ವಯಸ್ಸಿನಲ್ಲಿಯೇ ಇದ್ದಕ್ಕಿದ್ದಂತೆ ಹೃದಯ ಸ್ತಂಭನದಿಂದ ಉಸಿರು ಚೆಲ್ಲುತ್ತಿರುವ ಘಟನೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವಾಗಲೇ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಬಸನಗೌಡ (34) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ ಬಸನಗೌಡ, ಮಸ್ಕಿಯಲ್ಲಿ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಆರೋಗ್ಯವಾಗಿಯೇ ಇದ್ದ ಬಸನಗೌಡ ರಾತ್ರಿ ಮಲಗ್ಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದವರು ಚಿರನಿದ್ರೆಗೆ ಜಾರಿದ್ದಾರೆ. 34 ವರ್ಷದ ಪೊಲಿಸ್ ಕಾನ್ಸ್ ಟೇಬಲ್ ಹಠಾತ್ ಸಾವು ಸಿಬ್ಬಂದಿಗಳಲ್ಲಿ ಆಘಾತ ತಂದಿದೆ.