ಪ್ರೌಢಶಾಲೆಯ ತರಗತಿಯೊಂದಕ್ಕೆ ಗನ್ ಹಿಡಿದು ಬಂದ ವ್ಯಕ್ತಿಯೊಬ್ಬನನ್ನು ತಕ್ಷಣವೇ ಬಂಧಿಸಿದ ಪೊಲೀಸರು ಭಾರೀ ಅನಾಹುತವೊಂದನ್ನು ತಪ್ಪಿಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಜರುಗಿದೆ.
ಶಾಲಾ ಮಕ್ಕಳನ್ನು ಒತ್ತೆಯಾಳುಗಳನ್ನಾಗಿಟ್ಟ ಇಟ್ಟುಕೊಳ್ಳಬಹುದಾಗಿದ್ದ ಸಾಧ್ಯತೆಯನ್ನು ಈ ಮೂಲಕ ಇಲ್ಲವಾಗಿಸಿದ ಪೊಲೀಸರ ಧೈರ್ಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶ್ಲಾಘಿಸಿದ್ದಾರೆ.
ಹಳೆಯ ಮಾಲ್ಡಾದ ಮುಚಿಯಾ ಆಂಚಲ್ ಚಂದ್ರ ಮೋಹನ್ ಪ್ರೌಢ ಶಾಲೆಯಲ್ಲಿ ಈ ಘಟನೆ ಜರುಗಿದೆ. ಅನಾಮಧೇಯ ವ್ಯಕ್ತಿಯೊಬ್ಬ ಗನ್ ಹಿಡಿದು ಬಂದು ಜೋರಾಗಿ ಕೂಗಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಶಾಲೆಯ ಎಂಟನೇ ತರಗತಿ ಕೊಠಡಿಯೊಳಗೆ ಬಂದ ಈ ವ್ಯಕ್ತಿ, ಗನ್ ಹಿಡಿದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರತ್ತ ಕೂಗಾಡಿದ್ದು, ಅವರನ್ನೆಲ್ಲಾ ಕೊಲ್ಲುವುದಾಗಿ ಬೆದರಿಸಿದ್ದಾನೆ. ಕೂಡಲೇ ನಮ್ಮ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಈ ವೇಳೆ ಒಂದು ಪಿಸ್ತೂಲ್, ದ್ರವವೊಂದನ್ನು ಹೊಂದಿದ್ದ ಎರಡು ಬಾಟಲಿಗಳೂ ಹಾಗೂ ಚಾಕುವನ್ನು ಆತನಿಂದ ವಶಕ್ಕೆ ಪಡೆಯಲಾಗಿದೆ,” ಎಂದು ಅಧಿಕಾರಿ ತಿಳಿಸಿದ್ದಾರೆ.
ತನ್ನ ಪತ್ನಿ ಹಾಗೂ ಪುತ್ರ ಒಂದು ವರ್ಷದಿಂದ ನಾಪತ್ತೆಯಾಗಿದ್ದು, ಈ ವಿಚಾರವನ್ನು ಆಡಳಿತದ ಗಮನಕ್ಕೆ ತರಲು ತಾನು ಹೀಗೆ ಮಾಡಿದ್ದಾಗಿ ಈತ ಹೇಳಿಕೊಂಡಿದ್ದಾನೆ.