ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ 15 ನಿಮಿಷಗಳ ಕಾಲ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಸೋಮವಾರ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಪ್ರಧಾನಿ ಮೋದಿಯೊಂದಿಗಿನ ಪ್ರತ್ಯೇಕ ಸಭೆಯಲ್ಲಿ ಭಾಗವಹಿಸಿರೋದು ರಾಜ್ಯ ರಾಜಕಾರಣದಲ್ಲಿ ಹೊಸ ನಾಯಕತ್ವದ ಪ್ರಶ್ನೆ ಹುಟ್ಟುಹಾಕಿದೆ.
ಈ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೋದಿಯೊಂದಿಗಿನ ಬಿ.ಎಸ್.ವೈ ಸಭೆ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು ಯಡಿಯೂರಪ್ಪನವರು ಮತ್ತೊಮ್ಮೆ ರಾಜ್ಯದ ನಾಯಕತ್ವ ವಹಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಬಿ.ಎಸ್.ವೈ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಅವರ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಆಗಿ ನೇಮಿಸಲಾಗಿದೆ. ಆದರೆ ಬೊಮ್ಮಾಯಿಯವರ ಆಡಳಿತದ ಬಗ್ಗೆ ಹೆಚ್ಚು ತೃಪ್ತಿಯಿಲ್ಲದ ಹಿನ್ನೆಲೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಬಿ.ಎಸ್.ವೈ. ಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಲಿದೆಯಾ ಎಂಬ ಊಹಾಪೋಹಗಳಿವೆ. ಸದ್ಯ ಯಡಿಯೂರಪ್ಪನವರಿಗೆ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ.