ಬೆಂಗಳೂರು: ‘ನಮ್ಮ ವಿಜ್ಞಾನಿಗಳ ಶಕ್ತಿ ಸಾಮರ್ಥ್ಯ ಇಡೀ ವಿಶ್ವಕ್ಕೆ ಗೊತ್ತಾಗಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋಗೆ ಭೇಟಿ ನೀಡಲು ನಿರ್ಧರಿಸಿದ್ದೆ. ಹಾಗಾಗಿ, ವಿದೇಶದಿಂದ ನೇರವಾಗಿ ವಿಜ್ಞಾನಿಗಳ ಭೇಟಿ ಮಾಡಲು ಬಂದಿದ್ದೇನೆ. ಇಸ್ರೋಗೆ ತೆರಳಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.’
ಹೀಗೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಗ್ರೀಸ್ ನಿಂದ ಬೆಂಗಳೂರಿಗೆ ಬಂದಿಳಿದ ಮೋದಿ ಹೆಚ್ಐಎಲ್ ಏರ್ಪೋರ್ಟ್ ಬಳಿ ಭಾಷಣ ಮಾಡಿದ್ದಾರೆ.
ವಿಜ್ಞಾನಿಗಳ ಸಾಧನೆಗೆ ವಿಶ್ವವೇ ಸಂಭ್ರಮಿಸಿದೆ. ಚಂದ್ರಯಾನದ ಸಮಯದಲ್ಲಿ ನಾನು ವಿದೇಶದಲ್ಲಿದ್ದೆ. ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗವರ್ನರ್ ಎಲ್ಲರಿಗೂ ಮನವಿ ಮಾಡಿದ್ದೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸ್ವಾಗತಿಸುವ ಶಿಷ್ಟಾಚಾರ ಅಗತ್ಯವಿಲ್ಲ ಎಂದು ಮೊದಲೇ ಹೇಳಿದ್ದೆ. ಬೆಂಗಳೂರಿನ ಜನ ಉತ್ಸಾಹದಿಂದ ಬಂದಿದ್ದೀರಿ. ಸಂಶೋಧನೆಗೆ ಜಯವಾಗಲಿ ಎಂದು ಹೇಳಿದ್ದಾರೆ.
ಇಂತಹ ಐತಿಹಾಸಿಕ ಕ್ಷಣದಲ್ಲಿ ನನ್ನನ್ನು ನಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಲಿಲ್ಲ. ವಿದೇಶದಲ್ಲಿದ್ದಾಗಲೇ ಭಾರತಕ್ಕೆ ಹೋಗುತ್ತಿದ್ದಂತೆ ಬೆಂಗಳೂರಿಗೆ ಭೇಟಿ ನೀಡಬೇಕೆಂದು ಬಯಸಿದ್ದೆ ಎಂದು ಹೇಳಿದ ಮೋದಿ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದು ಘೋಷಣೆ ಮೊಳಗಿಸಿದ್ದಾರೆ. ನಂತರ ಇಸ್ರೋ ಕೇಂದ್ರಕ್ಕೆ ತೆರಳಿದ್ದಾರೆ.