ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್ ಯೋಜನೆ) 14ನೇ ಕಂತಿನ ಪಾವತಿಯನ್ನು ಫಲಾನುಭವಿಗಳ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ವರ್ಷದಲ್ಲಿ ಮೂರು ಬಾರಿ 2,000 ರೂ. ಗಳಂತೆ ಒಟ್ಟು 6,000 ರೂ. ಗಳನ್ನು ಈ ಯೋಜನೆಯಡಿ ರೈತರು ತಂತಮ್ಮ ಬ್ಯಾಂಕ್ ಖಾತೆಗಳಿಗೆ ಸ್ವೀಕರಿಸುತ್ತಾರೆ. ಸಾಮಾನ್ಯವಾಗಿ ಪ್ರತಿ ಕಂತಿನಲ್ಲೂ ರೈತರು ತಲಾ 2,000 ರೂ.ಗಳನ್ನು ಸ್ವೀಕರಿಸುತ್ತಾರೆ. ಆದರೆ 13ನೇ ಕಂತಿನ ಪಾವತಿ ವೇಳೆ ತಮ್ಮ ಪಾಲಿನ 2,000 ರೂ.ಗಳನ್ನು ಸ್ವೀಕರಿಸಲು ವಿಫಲರಾದ ರೈತರಿಗೆ ಈ ಬಾರಿ ಒಟ್ಟು 4,000 ರೂ.ಗಳು ಖಾತೆಗೆ ಬಂದು ಬೀಳಲಿದೆ.
ತಂತಮ್ಮ ಗುರುತಿನ ಖಾತ್ರಿ ಮಾಡಲು ವಿಫಲರಾದ ಅನೇಕ ರೈತರಿಗೆ ಕಳೆದ ಕಂತಿನ ಪಾವತಿ ಮಾಡಲಾಗಿಲ್ಲ. ಆದರೆ ಈ ಬಾರಿ ತಮ್ಮ ಗುರುತುಗಳನ್ನು ದೃಢೀಕರಿಸಿದ ರೈತರಿಗೆ ಕಳೆದ ಬಾರಿಯ ಮೊತ್ತವೂ ಸೇರಿ ಒಟ್ಟಾರೆ 4,000 ರೂ.ಗಳು ಖಾತೆಗೆ ಜಮೆಯಾಗಲಿದೆ.
ಪಿಎಂ ಕಿಸಾನ್ ಜಾಲತಾಣದಲ್ಲಿ ಫಲಾನುಭವಿ ರೈತರು ತಂತಮ್ಮ ಹೆಸರುಗಳನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.