ಕೊಟ್ಟಾಯಂನ ಕಂಗಾಜದ 70 ವರ್ಷದ ಹಪ್ಪಳ ತಯಾರಕ ಪಿ ಕೆ ರಾಜನ್ ಅವರು ಹಪ್ಪಳ ತಯಾರಿಸುವುದರಿಂದ ಬರುವ ಹಣದಿಂದ ಜಗತ್ತನ್ನು ಸುತ್ತುವ ಕನಸು ಕಾಣುತ್ತಿದ್ದಾರೆ. ಇಲ್ಲಿಯವರೆಗೆ, ರಾಜನ್ 40 ದೇಶಗಳಿಗೆ ಭೇಟಿ ನೀಡಿದ್ದು, ಬಾಕಿ ದೇಶಗಳ ಭೇಟಿಗೆ ತಯಾರಿ ನಡೆಸುತ್ತಿದ್ದಾರೆ.
ಪ್ರತಿಯೊಬ್ಬರೂ ಪ್ರಯಾಣಿಸಬೇಕು ಮತ್ತು ಜಗತ್ತನ್ನು ಅನ್ವೇಷಿಸಬೇಕು ಎಂಬುದು ರಾಜನ್ ಅವರ ಮೂಲಮಂತ್ರವಾಗಿದ್ದು, ಕಷ್ಟಪಟ್ಟು ದುಡಿದು ಕೇವಲ ಹಣ ಸಂಪಾದಿಸುವುದರಿಂದ ಬದುಕು ಅರ್ಥಹೀನ ಎನ್ನುತ್ತಾರೆ. ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದರೂ ಸಹ, ಅವರು ತಮ್ಮ ಹಪ್ಪಳ ತಯಾರಿಕೆ ಹಾಗೂ ಮಾರಾಟದ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ವಲಸೆ ಕಾರ್ಮಿಕರು ಸೇರಿದಂತೆ 24 ಕಾರ್ಮಿಕರು ಅವರ ಹಪ್ಪಳ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಾರೆ.
ರಾಜನ್ ಅವರಿಗೆ ಬಾಲ್ಯದಿಂದಲೇ ಪ್ರವಾಸವೆಂದರೆ ಅಚ್ಚುಮೆಚ್ಚು. ಅವರ ಆರಂಭಿಕ ಪ್ರವಾಸಗಳು ಮುನ್ನಾರ್, ಊಟಿ, ಕೊಡೈಕೆನಾಲ್ ಮತ್ತು ಮೈಸೂರು ಮುಂತಾದ ಸ್ಥಳಗಳಾಗಿತ್ತು. ಮೊದಲಿಗೆ, ದೀರ್ಘ ಪ್ರಯಾಣ ತಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದೆಂದು ಅವರು ಚಿಂತಿಸುತ್ತಿದ್ದು, ಆದರೆ, ವ್ಯಾಪಾರ ಬೆಳೆದಂತೆ ಮತ್ತು ಅವರ ಹಿರಿಯ ಮಗ ರಾಜೇಶ್ ಅದರ ನಿರ್ವಹಣೆಯನ್ನು ವಹಿಸಿಕೊಂಡ ಬಳಿಕ ಅವರು ಪ್ರಯಾಣಿಸಲು ಹೆಚ್ಚು ಸಮಯವನ್ನು ಪಡೆದುಕೊಂಡಿದ್ದಾರೆ.
50 ನೇ ವಯಸ್ಸಿನಿಂದ, ಅವರು ನಿಯಮಿತವಾಗಿ ಪ್ರವಾಸಗಳಿಗೆ ಹೋಗಿದ್ದು, ಭಾರತದ ಬಹುತೇಕ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅವರ ಮೊದಲ ಅಂತರರಾಷ್ಟ್ರೀಯ ಪ್ರವಾಸ ಚೀನಾಕ್ಕೆ, ಬಳಿಕ ಅವರು ಟರ್ಕಿ, ಪೋಲೆಂಡ್, ಯುಕೆ, ಜರ್ಮನಿ, ಇಟಲಿ ಮತ್ತು ಯುಎಸ್ಎಗೆ ಭೇಟಿ ನೀಡಿದ್ದಾರೆ. ರಷ್ಯಾಕ್ಕೆ ಭೇಟಿ ನೀಡಬೇಕೆಂಬ ಅವರ ಬಹುದಿನದ ಆಸೆ ಕಳೆದ ವಾರ ಈಡೇರಿದೆ. ಇದು 10 ದಿನಗಳ ಪ್ರವಾಸವಾಗಿತ್ತು. ಅವರ ಪಟ್ಟಿಯಲ್ಲಿ ಮುಂದಿನದು ಅಜೆರ್ಬೈಜಾನ್.
ಪ್ರತಿ ಪ್ರವಾಸದ ಮೊದಲು, ರಾಜನ್ ಅವರು ಭೇಟಿ ನೀಡಲಿರುವ ದೇಶದ ಬಗ್ಗೆಸಂಶೋಧನೆ ಮಾಡುತ್ತಾರೆ. ನೆನಪಿಗಾಗಿ ಪ್ರತಿ ಸ್ಥಳದಿಂದ ಸ್ಮರಣಿಕೆಯನ್ನು ಮರಳಿ ತರುತ್ತಾರೆ. ಅವರ ಪತ್ನಿ ಓಮನಾ ಮತ್ತು ಮಕ್ಕಳಾದ ರಾಜೇಶ್ ಮತ್ತು ರತೀಶ್ ಅವರ ಈ ಕಾರ್ಯವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ.