
ಕಡಲನಗರಿ ಮಂಗಳೂರು ಪ್ರವಾಸಿಗರ ಫೆವರೇಟ್ ಸ್ಥಳ. ಯಾಕಂದ್ರೆ ಇಲ್ಲಿ ಪ್ರವಾಸಿ ಸ್ಥಳಗಳಿಗೆ ಯಾವುದೆ ಕೊರತೆಯಿಲ್ಲ. ಇಂತಹ ಪ್ರವಾಸಿ ಸ್ಥಳಗಳಲ್ಲಿ ಮಂಗಳೂರು ಹೊರವಲಯದ ಮೂಡುಶೆಡ್ಡೆಯ ಬಳಿ ಇರುವ ಪಿಲಿಕುಳ ನಿಸರ್ಗಧಾಮವೂ ಒಂದು. ಸಾಕಷ್ಟು ಸಂಖ್ಯೆಯಲ್ಲಿ ಟೂರಿಸ್ಟ್ ಗಳು ಇಲ್ಲಿಗೆ ಬರ್ತಾರೆ.
ಪಿಲಿಕುಳ ನಿಸರ್ಗಧಾಮದಲ್ಲಿ ಜೈವಿಕ ಉದ್ಯಾನವನವೇ ಸುಮಾರು 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದು ದೇಶದ 17 ಬೃಹತ್ ವಿವಿಧ ಮೃಗಾಲಯದಲ್ಲಿ ಇದು ಒಂದಾಗಿದೆ. ವಿವಿಧ ಪ್ರಭೇದದ 1,200 ಕ್ಕೂ ಅಧಿಕ ಪ್ರಾಣಿ, ಪಕ್ಷಿ ಉರಗಗಳು ಇಲ್ಲಿವೆ. ರಾಜ್ಯದಲ್ಲಿ ಬನ್ನೇರುಘಟ್ಟ ಹಾಗೂ ಮೈಸೂರು ಹೊರತುಪಡಿಸಿದರೆ ಮೂರನೇ ಅತೀ ದೊಡ್ಡ ಮೃಗಾಲಯ ಇದಾಗಿದೆ.
ದೇಶದಲ್ಲೇ ಅತೀ ವಿರಳವಾಗಿರುವ ಕೃಷ್ಣ ಮೃಗದ ಸಂತತಿ ಈ ಜೈವಿಕ ಉದ್ಯಾನವನದಲ್ಲಿ ಜಾಸ್ತಿಯಾಗಿದೆ. ಪಿಲಿಕುಳ ಮೃಗಾಲಯದಲ್ಲಿ ಚಿಟ್ಟೆ ಜಿಂಕೆ, ಸಾರಂಗ, ಕೃಷ್ಣ ಮೃಗ ಸಹಿತ ವಿವಿಧ ಜಿಂಕೆ ಪ್ರಬೇಧಗಳಿವೆ. ಪಿಲಿಕುಳದ ಝೂನಲ್ಲಿರುವ ಎಲ್ಲಾ ಪ್ರಾಣಿ, ಪಕ್ಷಿಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಇನ್ನು ಇಲ್ಲಿ ಬೋಟಿಂಗ್ ಮಾಡುವುದಕ್ಕೂ ಅವಕಾಶವಿದೆ. ಇದರ ಜೊತೆ ಮಾನಸ ವಾಟರ್ ಪಾರ್ಕ್ ಕೂಡ ಇಲ್ಲಿದೆ. ಹೀಗಾಗಿ ಒಂದಿಡಿ ದಿನ ಇಲ್ಲಿ ಕಳೆಯುವಷ್ಟು ಮನೋರಂಜನಾ ಕೇಂದ್ರಗಳಿವೆ.



