ಬೆಂಗಳೂರು: ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಬಗ್ಗೆ ಅಕ್ಷೇಪಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಶಕ್ತಿ ಯೋಜನೆಯಿಂದ ಪ್ರಯಾಣಿಕರು ಅನೇಕ ತೊಂದರೆ ಎದುರಿಸುವಂತೆ ಆಗಿದೆ. ಈ ಯೋಜನೆ ಆರ್ಥಿಕ ಸಂಕಷ್ಟಗಳಿಗೆ ದೂಡುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.
ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್, ನೇಹಾ ವೆಂಕಟೇಶ್, ಯಾಶಿಕಾ ಸರವಣ ಹೈಕೋರ್ಟ್ ಗೆ ಪಿಎಎಲ್ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಸಾರಿಗೆ ಇಲಾಖೆ ಹಾಗೂ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತಿಭಾದಿಗಳನ್ನಾಗಿ ಮಾಡಲಾಗಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್ ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಸೀಟು ಪಡೆಯಲು ಗಲಾಟೆ ಹೊಡೆದಾಟಗಳು ನಡೆಯುತ್ತಿವೆ,
ಹಿರಿಯ ನಾಗರಿಕರು, ಮಕ್ಕಳು ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಚಿತ ವರ್ತನೆ, ಅಹಿತಕರ ಘಟನೆ ನಡೆಯುತ್ತಿವೆ. ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್ ಗಳು ಗಲಾಟೆಯ ಸ್ಥಳಗಳಾಗಿವೆ ಎಂದು ಅರ್ಜಿದಾರರು ದೂರಿದ್ದಾರೆ.
ಯೋಜನೆ ಜಾರಿಯಾದಾಗಿನಿಂದ ಮೂರು ಕೋಟಿಯಷ್ಟು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ತೆರಿಗೆದಾರರ 100 ಕೋಟಿ ರೂ.ನಷ್ಟು ಹಣ ಪ್ರತಿ ವಾರ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ಹೈಕೋರ್ಟ್ ನಲ್ಲಿ ಸಲ್ಲಿಕೆಯಾದ ಈ ಅರ್ಜಿ ವಿಚಾರಣೆಗೆ ಬರಬೇಕಿದೆ.