
ಉತ್ತರ ಪ್ರದೇಶದ ಹಮೀರಪುರ ಜಿಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿ ನಾಯಿಯೊಂದು ಒಂಭತ್ತು ಮರಿಗಳಿಗೆ ಜನ್ಮ ನೀಡಿದೆ. ಇದ್ರಿಂದ ಖುಷಿಗೊಂಡ ಮಾಲೀಕರು ಪಾರ್ಟಿಯನ್ನು ಆಯೋಜಿಸಿದ್ದರು. ಅದ್ಧೂರಿಯಾಗಿ ಪಾರ್ಟಿ ಏರ್ಪಡಿಸಿ ಗ್ರಾಮದ ಎಲ್ಲರಿಗೂ ಊಟ ಬಡಿಸಿದ್ದಾರೆ. ಸಂತೋಷದಲ್ಲಿ ಮಾಲಿಕರು ಹಾಡನ್ನು ಹಾಡಿದ್ದಾರೆ. ಈ ನಾಯಿಗೆ ಚಟನಿ ಎಂದು ಹೆಸರಿಡಲಾಗಿದೆ.
ಚಟನಿ ಕಳೆದ ಮೂರು ವರ್ಷಗಳಿಂದ ಒಂಭತ್ತು ಮರಿಗಳಿಗೆ ಜನ್ಮ ನೀಡ್ತಿದೆ. ಎಲ್ಲ ಮರಿಗಳು ದೊಡ್ಡದಾಗಿ ಮನೆಯಿಂದ ಹೊರಗೆ ಹೋದ್ರೂ ಚಟನಿ ಮಾತ್ರ ರಾಜಕಲಿ ಮನೆಯಲ್ಲೇ ಉಳಿದುಕೊಂಡಿದೆ. ಚಟನಿ ಮನೆಗೆ ಬಂದ್ಮೇಲೆ ರಾಜಕಲಿ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆಯಂತೆ. ಹಾಗಾಗಿ ಅದನ್ನು ಕುಟುಂಬದವರು ಹೆಚ್ಚು ಪ್ರೀತಿ ಮಾಡ್ತಾರೆ.
ಹೆರಿಗೆ ನಂತ್ರ ಆಚರಿಸುವ ಕಾರ್ಯಕ್ರಮವನ್ನು ರಾಜಕಲಿ ಮನೆಯಲ್ಲಿ ಅದ್ಧೂರಿಯಾಗಿ ಮಾಡಲಾಗಿದೆ. ನಾಲ್ಕು ನೂರಕ್ಕೂ ಹೆಚ್ಚು ಜನರು ರಾಜಕಲಿ ಮನೆಗೆ ಬಂದಿದ್ದರು. ಪುರಿ ಸಬ್ಜಿ ಜೊತೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಚಟನಿ ಬೇರೆ ಬೇರೆ ಬಣ್ಣದ ಒಂಭತ್ತು ಮರಿಗಳಿಗೆ ಜನ್ಮ ನೀಡಿದ್ದು ರಾಜಕಲಿಗೆ ಖುಷಿ ನೀಡಿದೆ. ಬಂದವರೆಲ್ಲ ಚಟನಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ನಾಯಿ ನಾಲ್ಕರಿಂದ ಆರು ಮರಿಗಳಿಗೆ ಒಮ್ಮೆ ಜನ್ಮ ನೀಡುತ್ತದೆ. ಆದ್ರೆ ಚಟನಿ ಒಂಭತ್ತು ಮರಿಗಳಿಗೆ ಜನ್ಮ ನೀಡುತ್ತಿರೋದು ಇನ್ನೊಂದು ವಿಶೇಷ.