ತುಮಕೂರು: 2005ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲ್ ದಾಳಿ, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಾಜಿ ನಕ್ಸಲರನ್ನು ಪಾವಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕೋರ್ಟ್ ವಿಚಾರಣೆಗೆ ಸತತವಾಗಿ ಗೈರಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪಾವಗಡ ತಾಲೂಕು ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ಆರೋಪಿಗಳು 4 ಬಾರಿ ವಿಚಾರಣೆಗೆ ಹಾಜರಾಗದೇ ಆಂಧ್ರಪ್ರದೇಶದ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಇದೀಗ ಕೋರ್ಟ್ ಸೂಚನೆ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ-ಆಂಧ್ರ ಗಡಿ ಭಾಗವಾಗಿರುವ ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ನಕ್ಸರ ಹಾವಳಿ ಹೆಚ್ಚಿದ್ದರಿಂದ 2005ರಲ್ಲಿ 30 ಸಿಬ್ಬಂದಿಗಳ ಕೆ ಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿತ್ತು. ಸೆ.10ರ ರಾತ್ರಿ 10 ಗಂಟೆ ಸುಮಾರಿಗೆ 300 ಜನರಿದ್ದ ನಕ್ಸಲರ ಗುಂಪು ಕೆ ಎಸ್ ಆರ್ ಪಿ ತುಕಡಿ ಮೇಲೆ ದಾಳಿ ನಡೆಸಿ, ಕೆ ಎಸ್ ಆರ್ ಪಿ ತುಕಡಿ ತಂಗಿದ ಶಾಲೆಯ ಕಟ್ಟಡಕ್ಕೆ ನುಗ್ಗಿದ್ದರು. ಪೊಲೀಸರು ಶರಣಾಗುವಂತೆ ವಾರ್ನಿಂಗ್ ಕೊಟ್ಟರೂ ಕೇಳದ ನಕ್ಸಲರು ಇಬ್ಬರು ಪೊಲೀಸ್ ಅಧಿಕರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನಚಕಮಕಿ ನಡೆದಿತ್ತು. ನಕ್ಸಲರು ಶಾಲಾ ಕಟ್ಟಡದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ನಕ್ಸಲರ ಜೊತೆಗಿನ ಹೋರಾಟದಲ್ಲಿ 6 ಪೊಲೀಸರು ಮೃತಪಟ್ಟಿದ್ದರು. ಘಟನೆ ಸಂಬಂಧ 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.