ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕೆಲ ಶಾಸಕ, ಸಂಸದರನ್ನು ಸೆಳೆಯಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ‘ಆಪರೇಷನ್ ಹಸ್ತ’ ಕ್ಕೆ ಪುಷ್ಠಿ ನೀಡುವಂತೆ ಕೆಲವೊಂದು ರಾಜಕೀಯ ಬೆಳವಣಿಗೆಗಳು ನಡೆದಿದ್ದವು.
ಇದರ ಮಧ್ಯೆ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಎನ್.ಎಸ್. ಬೋಸರಾಜು, ದೇಶದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ‘ಆಪರೇಷನ್ ಕಮಲ’ ಎಂಬ ಕೆಟ್ಟ ಪದ್ಧತಿಗೆ ಬಿಜೆಪಿ ನಾಂದಿ ಹಾಡಿತ್ತು. ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಅಪಚಾರ ಎಸಗಲಾಗಿತ್ತು ಎಂದು ಕಿಡಿ ಕಾರಿದರು.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆಪರೇಷನ್ ಎಂಬುದು ಕೆಟ್ಟ ಶಬ್ದ. ಆದರೆ ಕಾಂಗ್ರೆಸ್ ನದ್ದು ಆಪರೇಷನ್ ಅಲ್ಲ ಕೋ – ಆಪರೇಷನ್. ನಾವು ಆಪರೇಷನ್ ಎಂಬ ಕೆಟ್ಟ ಶಬ್ದವನ್ನು ಉಪಯೋಗಿಸುವುದಿಲ್ಲ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನ್ಯ ಪಕ್ಷಗಳ ಶಾಸಕರು, ಮುಖಂಡರು ಮುಖ್ಯಮಂತ್ರಿಯವರನ್ನು ಭೇಟಿಯಾಗುವುದು ಸಹಜ ಎಂದು ಹೇಳಿದರು.