ಮಲಯಾಳಂ ಚಲನಚಿತ್ರ ನಿರ್ದೇಶಕ ಒಮರ್ ಲುಲು ವಿರುದ್ಧ ನಟಿಯೊಬ್ಬರು ಅತ್ಯಾಚಾರ ಆರೋಪ ಕೇಸ್ ದಾಖಲಿಸಿದ್ದಾರೆ. ಕೇರಳ ಪೊಲೀಸರು ನಟಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 2019 ರ ಒರು ಅಡಾರ್ ಲವ್ ಎಂಬ ರೊಮ್ಯಾಂಟಿಕ್ ಕಾಮಿಡಿ ಚಲನಚಿತ್ರದ ಮೂಲಕ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಅನ್ನು ಸ್ಟಾರ್ ಮಾಡಿದ ಈ ನಿರ್ದೇಶಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
ಯುವ ನಟಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಅಧಿಕಾರಿಯ ಹೇಳಿಕೆ ಆಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೊಚ್ಚಿ ನಗರ ಪೊಲೀಸ್ ಆಯುಕ್ತರು ದೂರನ್ನು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿದ ನಂತರ, ಪ್ರಕರಣವನ್ನು ಅಪರಾಧ ನಡೆದಿದೆ ಎಂದು ಹೇಳಲಾಗಿರುವ ನೆಡುಂಬಸ್ಸೆರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ನಿರ್ದೇಶಕ ಒಮರ್ ಲುಲು ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376 (ಅತ್ಯಾಚಾರ ಶಿಕ್ಷೆ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಒಮರ್ ಲುಲು ಪ್ರತಿಕ್ರಿಯಿಸಿದ್ದು, “ನಾನು ಆ ಹುಡುಗಿಯೊಂದಿಗೆ ಬಹಳ ಸಮಯದಿಂದ ಸ್ನೇಹಿತನಾಗಿದ್ದೆ. ಅನೇಕ ಪ್ರಯಾಣಗಳಲ್ಲಿ ಆಕೆ ನನ್ನ ಜೊತೆಗಿದ್ದಳು. ಆದಾಗ್ಯೂ, ಸ್ನೇಹದಲ್ಲಿ ಬಿರುಕು ಉಂಟಾಗಿದೆ ಮತ್ತು ಕಳೆದ ಆರು ತಿಂಗಳಿನಿಂದ ನಾವು ಸಂಪರ್ಕದಲ್ಲಿಲ್ಲ. ಈಗ ನಾನು ನನ್ನ ಹೊಸ ಸಿನಿಮಾ ಪ್ರಾರಂಭಿಸಿದಾಗ, ಅವಳು ಅಂತಹ ದೂರನ್ನು ನೀಡಿದ್ದಾಳೆ. ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ ಎಂಬ ಕೋಪವೇ ಇದಕ್ಕೆ ಕಾರಣ. ಅಥವಾ ಹಣ ವಸೂಲಿ ಮಾಡುವ ಬ್ಲಾಕ್‌ಮೇಲ್ ಯತ್ನದ ಭಾಗವಾಗಿರಬಹುದು,” ಎಂದು ಆರೋಪಿಸಿದರು.
ಹ್ಯಾಪಿ ವೆಡ್ಡಿಂಗ್ (2016) ಚಲನಚಿತ್ರದ ಮೂಲಕ ಒಮರ್ ಲುಲು ಚಲನಚಿತ್ರೋದ್ಯಮ ಪ್ರವೇಶಿಸಿದರು. ಅವರ ಚಲನಚಿತ್ರಗಳು ವಿಶೇಷವಾಗಿ ಚುಂಕ್ಜ್ (2017) ಚಿತ್ರ ಅಶ್ಲೀಲತೆ, ಮಹಿಳೆಯರನ್ನು ತೋರಿಸಿರುವ ಬಗ್ಗೆ ಆಕ್ಷೇಪಣೆಗೆ ಗುರಿಯಾಗಿದ್ದವು.