ಬೆಂಗಳೂರು: ಖಾಸಗಿ ಆ್ಯಪ್ ಗಳಿಂದ ಜನಕ್ಕೆ ಆಗುತ್ತಿರುವ ತೊಂದರೆ ತಪ್ಪಿಸಲು ಸರ್ಕಾರದಿಂದಲೇ ಓಲಾ, ಉಬರ್ ಮಾದರಿ ಆ್ಯಪ್ ರಚಿಸಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ.
ರಾಯಚೂರಿನಲ್ಲಿ ಕಲ್ಯಾಣ ರಥ ಸಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಸಾರಿಗೆ ಇಲಾಖೆ ವತಿಯಿಂದಲೇ ಓಲಾ, ಉಬರ್ ಮಾದರಿ ಹೊಸ ಆ್ಯಪ್ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಓಲಾ, ಉಬರ್ ಆ್ಯಪ್ ಗಳಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ಕಿರಿಕಿರಿ ತಪ್ಪಿಸಲು ಸರ್ಕಾರದಿಂದಲೇ ಹೊಸ ಆ್ಯಪ್ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಟ್ಯಾಕ್ಸಿ ಚಾಲಕರ ಸಭೆಯಲ್ಲಿ ಹೊಸ ಆ್ಯಪ್ ಅಭಿವೃದ್ದಿ ಬಗ್ಗೆ ತಿಳಿಸಿದ್ದು, ಎಲ್ಲಾ ಪ್ರಯಾಣಿಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುತ್ತದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಆ್ಯಪ್ ಸಿದ್ಧಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.