
ನವದೆಹಲಿ: ಬಾಲಸೋರ್ ರೈಲು ದುರಂತದ ಸಂತ್ರಸ್ತರ ಕ್ಲೈಮ್ ಇತ್ಯರ್ಥ ಪ್ರಕ್ರಿಯೆಗೆ ರಾಷ್ಟ್ರೀಯ ವಿಮಾ ಸಂಸ್ಥೆ ಎಲ್‌ಐಸಿ ಶನಿವಾರ ಹಲವು ಸಡಿಲಿಕೆಗಳನ್ನು ಪ್ರಕಟಿಸಿದೆ.
ಎರಡು ಪ್ರಯಾಣಿಕ ರೈಲುಗಳು ಮತ್ತು ಒಂದು ಗೂಡ್ಸ್ ರೈಲು ಒಳಗೊಂಡ ಅಪಘಾತದಲ್ಲಿ ಇಲ್ಲಿಯವರೆಗೆ ಕನಿಷ್ಠ 288 ಜನರ ಪ್ರಾಣಹಾನಿಯಾಗಿದ್ದು, 1,100 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಎಲ್‌ಐಸಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ, ಸಂತ್ರಸ್ತರ ಸಂಬಂಧಿಕರಿಗೆ ಕ್ಲೈಮ್ ಇತ್ಯರ್ಥ ಪ್ರಕ್ರಿಯೆಗೆ ಸಡಿಲಿಕೆಗಳನ್ನು ಘೋಷಿಸಿದರು.
ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ ತೊಂದರೆಗೊಳಗಾದವರಿಗೆ ಬೆಂಬಲ ನೀಡಲು ಎಲ್ಐಸಿ ಬದ್ಧವಾಗಿದೆ. ಹಣಕಾಸಿನ ಪರಿಹಾರ ಒದಗಿಸಲು ಕ್ಲೈಮ್ ಇತ್ಯರ್ಥವನ್ನು ತ್ವರಿತಗೊಳಿಸುತ್ತದೆ. LIC ಪಾಲಿಸಿಗಳ ಹಕ್ಕುದಾರರ ಕಷ್ಟ ತಗ್ಗಿಸಲು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗೆ ಸಹ ನಿಗಮ ಅನೇಕ ರಿಯಾಯಿತಿ ಘೋಷಿಸಿತು. ನೋಂದಾಯಿತ ಮರಣ ಪ್ರಮಾಣಪತ್ರಗಳ ಬದಲಿಗೆ ರೈಲ್ವೆ, ಪೊಲೀಸ್ ಅಥವಾ ಯಾವುದೇ ರಾಜ್ಯ ಅಥವಾ ಕೇಂದ್ರ ಅಧಿಕಾರಿಗಳು ಪ್ರಕಟಿಸಿದ ಸಾವು ನೋವುಗಳ ಪಟ್ಟಿಯನ್ನು ಸಾವಿನ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಹೇಳಲಾಗಿದೆ.
ಕ್ಲೈಮ್-ಸಂಬಂಧಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು, ಸಹಾಯ ಒದಗಿಸಲು ಕಾರ್ಪೊರೇಷನ್ ವಿಭಾಗೀಯ ಮತ್ತು ಶಾಖೆಯ ಮಟ್ಟದಲ್ಲಿ ವಿಶೇಷ ಸಹಾಯ ಕೇಂದ್ರ ಮತ್ತು ಕಾಲ್ ಸೆಂಟರ್ ಸಂಖ್ಯೆಯನ್ನು(022-68276827) ಸ್ಥಾಪಿಸಿದೆ.