ಬೆಂಗಳೂರು: ಸಾರ್ವಜನಿಕ ಸೇವಾ ವಾಹನಗಳಿಗೆ (ಡಿಸೆಂಬರ್ 1) ಇಂದಿನಿಂದ ಪ್ಯಾನಿಕ್ ಬಟನ್ -ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್(VLT) ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮಹಿಳೆಯರು, ಮಕ್ಕಳು ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಎಲ್ಲಾ ರೀತಿಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರಾಕಿಂಗ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕಿದೆ.
ಒಮ್ಮೆ ಪ್ಯಾನಿಕ್ ಬಟನ್ ವಾಹನಗಳಲ್ಲಿ ಅಳವಡಿಕೆಯಾದರೆ ಹಲವು ರೀತಿಯ ಉಪಯೋಗಗಳು ಇವೆ. ವಾಹನಗಳಲ್ಲಿ ಪ್ರಯಾಣಿಸುವಾಗ ಆರೋಗ್ಯದಲ್ಲಿ ಏರುಪೇರಾಗಿ ತುರ್ತು ವೈದ್ಯಕೀಯ ಸೇವೆ ಬೇಕಿದ್ರೆ ಅಥವಾ ಲೈಂಗಿಕ ದೌರ್ಜನ್ಯ ಅಥವಾ ಇನ್ನಿತರ ಅವಘಡಗಳು ಸಂಭವಿಸಿದರೆ ಪ್ಯಾನಿಕ್ ಬಟನ್ ಅನ್ನು ಕೂಡಲೇ ಒತ್ತಬಹುದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಇದನ್ನು ಕಮಾಂಡ್ ಸೆಂಟರ್ ವಾಹನದ ಲೊಕೇಶನ್ ಸಮೇತವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಿದ್ದು, ಪ್ರಯಾಣಿಕರ ರಕ್ಷಣೆಗೆ ಪೊಲೀಸರು ನೆರವಾಗಲು ಇದು ಸಹಾಯ ಮಾಡುತ್ತದೆ.
ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳು, ನ್ಯಾಷನಲ್ ಪರ್ಮಿಟ್ ಹೊಂದಿದ ಗೂಡ್ಸ್ ವಾಹನಗಳಿಗೆ ಇದು ಅನ್ವಯವಾಗಲಿದೆ. ಜಿ.ಎಸ್.ಟಿ. ಹೊರತುಪಡಿಸಿ ವಿ.ಎಲ್.ಟಿ. ವಿತ್ ಪ್ಯಾನಿಕ್ ಬಟನ್ ದರ 7599 ರೂ. ನಿಗದಿಪಡಿಸಲಾಗಿದೆ. ವಾಹನ ಎಲ್ಲಿದೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ, ಮಾರ್ಗ ಬದಲಾವಣೆ, ವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮ ಮೊದಲಾದ ಎಚ್ಚರಿಕೆ ಹಾಗೂ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ.