ಬೆಳಗಾವಿ ಸುವರ್ಣಸೌಧ : ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ಡಿಸೆಂಬರ್ 14ರಂದು ಸಹ ಚರ್ಚೆ ಮುಂದುವರೆಯಿತು. ಈ ಚರ್ಚೆಯಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಶಾಸಕರು ಭಾಗಿಯಾಗಿ ಹಲವಾರು ಸಲಹೆಗಳನ್ನು ನೀಡಿದರು.
ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಅವರು ಮಾತನಾಡಿ, ಇಂದು ಅಂತರ್ಜಲ ದುರ್ಬಳಕೆ ಅಧಿಕವಾಗುತ್ತಿದೆ. ನೀರು ಮಾರಾಟದ ವಸ್ತು ಆಗುತ್ತಿದೆ. ನೀರಿಗಾಗಿ ಊರಿಂದ ಊರಿಗೆ ಅಲೆಯುವುದು ದುಸ್ಥಿತಿ ಎದುರಾಗಿದೆ. ಆದ್ದರಿಂದ ರಾಜ್ಯದಲ್ಲಿ ಅಂತರ್ಜಲ ಕಾಪಾಡಲು ಕೇಂದ್ರ ಸರ್ಕಾರದ ಮಾದರಿಯಲ್ಲಿ ಅಂತರ್ಜಲ ಬಳಕೆ ನಿಯಂತ್ರಣ ಕಾಯ್ದೆ ಜಾರಿ ತರುವ ಮೂಲಕ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ಸಲಹೆ ಮಾಡಿದರು.
ರಾಜ್ಯದಲ್ಲಿ ಪ್ರಸ್ತುತ ಭೀಕರ ಬರವಿದ್ದು, ಬೇಸಿಗೆಯಲ್ಲಿ ಭೀಕರ ನೀರಿನ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಈಗಿನಿಂದಲೇ ರಾಜ್ಯದಲ್ಲಿರುವ ಜಲಾಶಯಗಳಲ್ಲಿನ ನೀರನ್ನು ಕುಡಿಯಲು ಮಾತ್ರ ಬಳಸಲು ಮೀಸಲಿಡಬೇಕು. ಜತೆಗೆ ಅಂತರ್ಜಲ ಅಭಿವೃದ್ಧಿಗಾಗಿ ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಸಿರಪುರ್ ಮಾದರಿ ಯೋಜನೆ ಜಾರಿ ತರುವಂತೆ ಸಲಹೆ ನೀಡಿದರು.
ಉತ್ತರ ಕರ್ನಾಟಕವು ರಾಜ್ಯದ ರಾಜಧಾನಿಯಿಂದ ದೂರ ಇರುವುದರಿಂದ ಶಾಸಕರು ಸೇರಿದಂತೆ ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ತೆರಳಲು ಸಾಧ್ಯವಾಗದೇ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಚಿವಾಲಯ ಮತ್ತು ನಿರ್ದೇಶನಾಲಯಗಳಲ್ಲಿ ನಮ್ಮ ಅಧಿಕಾರಿಗಳು, ಸಿಬ್ಬಂದಿ ಇಲ್ಲದ ಕಾರಣ ನಮಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಈಗಾಗಿ ಈ ಎರಡು ಕಚೇರಿಗಳಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಭಾಗದ ಸಿಬ್ಬಂದಿ-ಅಧಿಕಾರಿಗಳನ್ನು ಮೀಸಲು ಸೌಲಭ್ಯದ ಮೇಲೆ ನೇಮಕಾತಿ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷ್ಣ ಮೇಲ್ದಂಡೆ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಿದೆ. ಗೋದಾವರಿ, ಅಮರ್ಜ, ಬೆಣ್ಣೆತೊರಾ, ಭೀಮಾ ನೀರಾವರಿ ಯೋಜನೆಗಳಿಂದ ರೈತರಿಗೆ ಸೂಕ್ತವಾಗಿ ನೀರು ದೊರೆಯುವಂತಾಗಬೇಕಿದೆ. ಈ ಬಗ್ಗೆ ಸರ್ಕಾರವು ಚರ್ಚೆಗೆ ತೆಗೆದುಕೊಳ್ಳಬೇಕು. ದೊಡ್ಡ ದೊಡ್ಡ ಯೋಜನೆಗಳ ಬದಲು ಸಣ್ಣ ಯೋಜನೆಗಳನ್ನು ಕೈಗೆತ್ತಿಕೊಂಡರೇ ಅಧಿಕ ಪ್ರಯೋಜನ ಎಂದು ಹೇಳಿದರು. ಕಾವೇರಿ ಕೊಳ್ಳದ ನೀರಿನ ಬಗ್ಗೆ ನಡೆಸುವಂತೆ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಕುರಿತು ಸಹ ಚರ್ಚೆ ನಡೆಸಬೇಕು ಎಂದು ತಿಳಿಸಿದರು.
ಬೀದರ್‌ನಿಂದ ಬೆಂಗಳೂರಿಗೆ ಸುಗಮವಾಗಿ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಬೇಕು. ರಾಜ್ಯದ ಇತರೆ ಭಾಗಗಳಲ್ಲಿ ಬೇಡಿಕೆಗೆ ತಕ್ಕಂತೆ ನೀಡಿದ ಪ್ರಾಥಮಿಕ ಆರೋಗ್ಯ ಕೇಂದ್ರ-ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ನಮ್ಮ ಭಾಗಕ್ಕೂ ನೀಡಬೇಕು. ಕಲಬುರಗಿಯ ತೊಗರಿ ಮಂಡಳಿಯನ್ನು ಸಶಕ್ತಗೊಳಿಸಬೇಕು ಎಂದು ಸಲಹೆ ಮಾಡಿದರು.
ಕಲಬುರಗಿಯ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನೀರಾವರಿಯಿಂದ ವಂಚಿತವಾದ ಕಲಬುರಗಿ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ರಾಜ್ಯ ಸರ್ಕಾರವು ಮಹಾರಾಷ್ಟ್ರದ ಸರ್ಕಾರದ ಜತೆಗೆ ಮಾತನಾಡಿ ಭೀಮಾ ನದಿಯ ನೀರು ನಮಗೆ ದಕ್ಕುವಂತೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ಬೆಣ್ಣೆತೊರಾ ನದಿಯಿಂದ ಕೆರೆಗಳ ತುಂಬಿಸಲು 140 ಕೋಟಿ ರೂ.ವೆಚ್ಚದ ಯೋಜನೆ ಜಾರಿಗೊಳಿಸಬೇಕು. ಮೈಸೂರು ಭಾಗದಲ್ಲಿ ಮಾಡಿದಂತೆ ನಮ್ಮ ಭಾಗದಲ್ಲಿ ಸಹ ಶಿಕ್ಷಕರ ನೇಮಕ ಮಾಡಬೇಕು. ವಿದ್ಯುತ್, ಕಬ್ಬು ಬೆಳಗಾರರು, ತೊಗರಿ ಬೆಳಗಾರರ ಸಮಸ್ಯೆ ಬಗೆಹರಿಸಬೇಕು ಹಾಗೂ ತೊಗರಿ ಮಂಡಳಿ ಸಬಲಗೊಳಿಸಿ ಹೊಸ ತಳಿ ಸಂಶೋಧನೆ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ಮಾಡಿದರು.