ಬೆಂಗಳೂರಲ್ಲಿ ತಿಂಗಳಿಗೆ 80 ಸಾವಿರ ರೂಪಾಯಿ ಬಾಡಿಗೆ ನೀಡಿ ಫ್ಲಾಟ್ ನಲ್ಲಿರುವ ಸಾಫ್ಟ್ ವೇರ್ ಇಂಜಿನಿಯರ್ ಗೆ ಅದೊಂದು ಕೊರಗಿದೆ. ಅರೆ…! ಅದೆಂಥ ಕೊರಗು ಎಂದು ನೀವು ತಿಳಿದುಕೊಳ್ಳುವ ಮುನ್ನ ಅವರ ಹಿನ್ನೆಲೆಯನ್ನು ನೋಡೋಣ.
ಆಶಿಶ್ ಝಾ ಎಂಬ ಸಾಫ್ಟ್ ವೇರ್ ಇಂಜಿನಿಯರ್ ಒಂದು ವರ್ಷದ ಹಿಂದೆ ನೋಯ್ಡಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ನಗರದಲ್ಲಿ ಕಚೇರಿಗೆ ಹತ್ತಿರವಾಗುವ ಫ್ಲಾಟ್ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ದುಬಾರಿ ಬಾಡಿಗೆ ಮೊತ್ತ ನೀಡಿ ತಮ್ಮ ಕಚೇರಿ ಪಕ್ಕದಲ್ಲೇ ಇರುವ ಫ್ಲಾಟ್ ನಲ್ಲಿ ಬಾಡಿಗೆಗೆ ಇದ್ದರು. 26 ವರ್ಷ ವಯಸ್ಸಿನ ಈ ಸಾಫ್ಟ್ ವೇರ್ ಇಂಜಿನಿಯರ್ ಕಡಿಮೆ ಮೊತ್ತದಲ್ಲಿ ಕಚೇರಿಗೆ ದೂರವಿರುವ ಜಾಗಕ್ಕೆ ಹೋಗಿ ಬಾಡಿಗೆ ಮನೆ ತೆಗೆದುಕೊಳ್ಳುವುದಕ್ಕಿಂತ ತನ್ನ ಕೆಲಸದ ಸ್ಥಳಕ್ಕೆ ತುಂಬಾ ಹತ್ತಿರವಿರುವ ಜಾಗದಲ್ಲಿ ಮನೆ ಹುಡುಕಲು ಬಯಸಿದ್ದರು.
ಇದರಿಂದ ಸಮಯ ಉಳಿತಾಯವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಹೀಗೆ ದುಡ್ಡಿಗಿಂತ ಸಮಯಕ್ಕೆ ಹೆಚ್ಚು ಆದ್ಯತೆ ನೀಡಿದ ಆಶಿಶ್ ಝಾ, ಬಿನ್ನಿಪೇಟೆಯ ಗೇಟೆಡ್ ಕಮ್ಯುನಿಟಿಯಾದ ಪುರ್ವ ಸನ್ ಫ್ಲವರ್ ಅಪಾರ್ಟ್ ಮೆಂಟ್ ನಲ್ಲಿ 3-ಬಿಎಚ್‌ಕೆ ಫ್ಲಾಟ್ ಬಾಡಿಗೆಗೆ ಪಡೆದರು. ಇಲ್ಲಿಂದ ತನ್ನ ಕಚೇರಿಗೆ ಕೇವಲ 15 ನಿಮಿಷಗಳಲ್ಲಿ ತೆರಳಬಹುದೆಂದು ತಿಂಗಳಿಗೆ 80,000 ರೂ. ಬಾಡಿಗೆ ನೀಡಲು ಮುಂದಾದರು.
ಇತ್ತೀಚೆಗೆ ತಮ್ಮ 19 ನೇ ಮಹಡಿಯಲ್ಲಿರುವ ಫ್ಲಾಟ್‌ನಿಂದ ಕ್ಲಿಕ್ ಮಾಡಿದ ಚಿತ್ರದೊಂದಿಗೆ ಪೋಸ್ಟ್ ಮಾಡಿದಾಗ , ಫ್ಲಾಟ್ ಗೆ ಅವರು ಪಾವತಿಸುತ್ತಿರುವ ಬಾಡಿಗೆ ಮೊತ್ತವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಗೊಳಿಸಿತು, ಅಷ್ಟೇ ಅಲ್ಲದೇ ಪೋಸ್ಟ್ ವೈರಲ್ ಆಗಿತ್ತು.
80 ಸಾವಿರ ರೂ. ಬಾಡಿಗೆ ಮೊತ್ತವನ್ನು ನಾನೊಬ್ಬನೇ ಪಾವತಿಸುವುದಿಲ್ಲ. ನನ್ನೊಂದಿಗಿರುವ ಇಬ್ಬರು ಸ್ನೇಹಿತರು ಸಹ ಬಾಡಿಗೆ ಮೊತ್ತವನ್ನು ಹಂಚಿಕೊಳ್ಳುತ್ತಾರೆ. ಅವರು ಫ್ಲಾಟ್ ನಲ್ಲಿರುವ ಇತರ ಎರಡು ಕೋಣೆಗಳಲ್ಲಿರುತ್ತಾರೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು “ನಾನು ಇಲ್ಲಿ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದೇನೆ. ಇದು ಸಂಪೂರ್ಣ ಸುಸಜ್ಜಿತ ಸ್ಥಳವಾಗಿದೆ, ಹತ್ತಿರದಲ್ಲಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ಮಾರುಕಟ್ಟೆ ಇದೆ. ಹಾಗಾಗಿ ನಾನು ಯಾವುದಕ್ಕೂ ದೂರ ಹೋಗಬೇಕಾಗಿಲ್ಲ.” ಎಂದಿದ್ದಾರೆ.
ಅಲ್ಲದೆ ನಾನು ಹಣಕ್ಕಿಂತ ಸಮಯವನ್ನು ಹೆಚ್ಚು ಗೌರವಿಸುತ್ತೇನೆ ಎಂದು ಹೇಳಿದರು. “ಈ ಹಿಂದಿನ ನನ್ನ ಕೆಲಸದಲ್ಲಿ ನಾನು ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸಬೇಕಾಗಿದ್ದರಿಂದ ದೈನಂದಿನ ಪ್ರಯಾಣದ ಸಮಯವನ್ನು ಸಾಧ್ಯವಾದಷ್ಟು ಕಡಿತಗೊಳಿಸಬೇಕೆಂದು ನಾನು ನೋಯ್ಡಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ನಿರ್ಧರಿಸಿದ್ದೆ ” ಎಂದಿದ್ದಾರೆ.
ಆದರೆ 80,000 ರೂ. ಬಾಡಿಗೆಯ ಫ್ಲಾಟ್‌ನಲ್ಲಿ ವಾಸಿಸಲು ನಿಮಗೆ ಯಾವುದೇ ವಿಷಾದವಿದೆಯೇ ಎಂದು ಕೇಳಿದಾಗ, ನನಗೊಂದು ಕೊರಗಿದೆ. ಅದೇನೆಂದರೆ ನನ್ನ ಸ್ನೇಹಿತರೆಲ್ಲರೂ ತುಂಬಾ ದೂರದಲ್ಲಿ ವಾಸಿಸುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡಲು ನಮಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಅದನ್ನು ಹೊರತುಪಡಿಸಿ, ನನಗೆ ಬೇರೆ ಯಾವುದೇ ವಿಷಾದವಿಲ್ಲ ಎಂದಿದ್ದಾರೆ.