ಜಗತ್ತು ಮುಂದುವರೆದಂತೆ ಬದುಕುವ ರೀತಿಯೂ ಬದಲಾಗುತ್ತದೆ. ಮದುವೆ, ಪ್ರೀತಿಗೂ ಕೂಡ ವ್ಯಾಖ್ಯಾನಗಳು ಅಪ್ ಡೇಟ್ ಆಗುತ್ತಿರುತ್ತವೆ. ಜಪಾನ್ ನಲ್ಲಿ ಟ್ರೆಂಡ್ ನಲ್ಲಿರುವ ಮದುವೆಯೊಂದು ಗಂಡ- ಹೆಂಡ್ತಿ ಸಂಬಂಧಕ್ಕೆ ಹೊಸ ವ್ಯಾಖ್ಯಾನ ನೀಡಿದೆ.
ಅಲ್ಲಿ ಗಂಡು ಮತ್ತು ಹೆಣ್ಣು ಗಂಡ – ಹೆಂಡ್ತಿ ಆಗುತ್ತಾರೆ. ಬೇಕೆನಿಸಿದರೆ ಮಕ್ಕಳನ್ನೂ ಪಡೆಯುತ್ತಾರೆ. ಆದರೆ ಅವರ ನಡುವೆ ಪ್ರೀತಿಯಾಗಲೀ, ದೈಹಿಕ ಸಂಪರ್ಕವಾಗಲೀ ಇರುವುದಿಲ್ಲ. ಆರೆ ! ಇದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಉತ್ತರ “ಸ್ನೇಹ ಮದುವೆ” ಎಂಬುದು. ಈ ಪದ ಸಾಮಾನ್ಯವಾಗಿ ಕಾಣಿಸಿದರೂ ಇದರಲ್ಲಿ ಕೆಲವು ಸಂಕೀರ್ಣತೆಗಳಿವೆ. ಇದನ್ನು ಸರಳವಾಗಿ ಹೇಳುವುದಾದರೆ ಸ್ನೇಹ ಸಂಬಂಧವು ಮದುವೆ ಜೀವನವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಅದರಲ್ಲಿ ಹೆಂಡತಿ ಇರುತ್ತಾಳೆ ಮತ್ತು ಪತಿಯೂ ಇರುತ್ತಾನೆ. ಇದನ್ನು ಬಿಟ್ಟು ಇಲ್ಲಿ ಹೆಚ್ಚೇನೂ ಇರುವುದಿಲ್ಲ. ಯಾರು ಯಾರನ್ನೂ ಪ್ರಶ್ನಿಸುವುದಿಲ್ಲ ಮತ್ತು ಯಾರ ಬಗ್ಗೆಯೂ ಯಾರೂ ಸಂದೇಹ ಪಡುವುದಿಲ್ಲ. ಅವರು ಸ್ವತಂತ್ರವಾಗಿ ಬದುಕಬಹುದು ಮತ್ತು ಅವರ ಸ್ವಾತಂತ್ರ್ಯವನ್ನು ಗೌರವಿಸಲಾಗುತ್ತದೆ.
ಸಂಬಂಧದಲ್ಲಿ ಎಲ್ಲವೂ ಸರಿಯಾಗಿ ನಡೆದರೆ ಮತ್ತು ದಂಪತಿ ಮಕ್ಕಳನ್ನು ಹೊಂದಲು ಬಯಸಿದರೆ, ಅವರು ಮಕ್ಕಳನ್ನು ಕೃತಕ ರೀತಿಯಲ್ಲಿ ಸ್ವಾಗತಿಸುತ್ತಾರೆ. ಆದರೆ ಅವರು ನೇರವಾಗಿ ದೈಹಿಕ ಸಂಬಂಧ ಹೊಂದುವುದಿಲ್ಲ. ಸರಳವಾಗಿ ಹೇಳುವುದಾದರೆ, ನಮ್ಮ ಮನೆಯಲ್ಲಿ ಟಿವಿ, ಫ್ರಿಜ್, ಎಸಿ ಮತ್ತು ಕಾರ್ ಇದ್ದು ಅವುಗಳನ್ನು ಬಾಂಧವ್ಯವನ್ನು ಹೊಂದಿರುತ್ತೇವೆಯೇ ಹೊರತು ಯಾವುದೇ ಸಂಬಂಧ ಇರುವುದಿಲ್ಲ ಎಂಬಂತೆ.
ಈ ಸಂಬಂಧವು ಒಂದೇ ಮನೋಭಾವದ ಇಬ್ಬರು ಒಟ್ಟಿಗೆ ವಾಸಿಸುವ, ಪ್ರೀತಿ, ಲೈಂಗಿಕ ಸಂಬಂಧ ಇಲ್ಲದೇ ಸ್ನೇಹಪರವಾಗಿ ಮಾತನಾಡುವ ಜೀವನವಾಗಿರುತ್ತದೆ. ಕಾನೂನಿನ ಪ್ರಕಾರ ಅವರು ದಂಪತಿಗಳಾಗಿರುತ್ತಾರೆ. ತಮಗಿರುವ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗುತ್ತಾರೆ. ಇನ್ನೊಂದು ರೀತಿಯ ಸಂಬಂಧದಲ್ಲಿ ಅವರ ನಡುವಿನ ನಿಯಮ ಮತ್ತು ಸ್ನೇಹ ಉತ್ತಮವಾಗಿರುವವರೆಗೂ ಒಟ್ಟಿಗೆ ಇರುತ್ತಾರೆ. ಯಾವುದೇ ಸಮಸ್ಯೆಗಳು ಉದ್ಭವಿಸಿದರೆ ಅವರು ವಿಚ್ಛೇದನ ಪಡೆಯಬಹುದು.
ಸಾಂಪ್ರದಾಯಿಕ ವಿವಾಹದಲ್ಲಿ ಆಸಕ್ತಿ ಇಲ್ಲದವರು ಇಂತಹ ಹೊಸ ಟ್ರೆಂಡ್‌ಗೆ ಒಲವು ತೋರುತ್ತಿದ್ದಾರೆ. ಕಲರ್ಸ್ ಹೆಸರಿನ ಸಂಸ್ಥೆಯು ಇದರ ಬಗ್ಗೆ ಮಾತನಾಡುತ್ತಾ, ಸುಮಾರು 12 ಕೋಟಿ ಇರುವ ಜಪಾನ್ ಜನ ಸಂಖ್ಯೆಯ ಪೈಕಿ 12 ಲಕ್ಷ ಮಂದಿ ಈ ಟ್ರೆಂಡ್ ಅನುಸರಿಸುತ್ತಿದ್ದಾರೆ ಎಂದಿದೆ.