ಭಾರತದ ದುಬಾರಿ ಷೇರುಗಳ ಪಟ್ಟಿಯಲ್ಲಿದ್ದ ನೆಸ್ಲೆ ಇಂದು ಅಗ್ಗವಾಗಿದೆ. ಹೂಡಿಕೆದಾರರು ಕಡಿಮೆ ಮೊತ್ತದಲ್ಲಿ ನೆಸ್ಲೆ ಷೇರುಗಳನ್ನು ಖರೀದಿಸಬಹುದು. ಕಂಪನಿಯು ಇಂದಿನಿಂದ ನೆಸ್ಲೆ ಷೇರುಗಳನ್ನು ವಿಭಜಿಸಿದೆ. ಹಾಗಾಗಿ ಇನ್ನು ಮುಂದೆ ಚಿಲ್ಲರೆ ಹೂಡಿಕೆದಾರರು ಇದನ್ನು ಸುಲಭವಾಗಿ ಖರೀದಿಸಬಹುದು.
MNC FMCG ಸಂಸ್ಥೆಯ ಷೇರುಗಳನ್ನು 1:10 ಅನುಪಾತದಲ್ಲಿ ವಿಭಜಿಸಲಾಗಿದೆ. ಇದರರ್ಥ ನೀವು ರೆಕಾರ್ಡ್ ದಿನಾಂಕದಂದು ನೆಸ್ಲೆ ಇಂಡಿಯಾದ 1 ಷೇರನ್ನು ಹೊಂದಿದ್ದರೆ, ವಿಭಜನೆಯ ನಂತರ ನೀವು 10 ಷೇರುಗಳನ್ನು ಹೊಂದಿರುತ್ತೀರಿ. ಅದೇ ಸಮಯದಲ್ಲಿ, ನೀವು ನೆಸ್ಲೆಯ 10 ಷೇರುಗಳನ್ನು ಹೊಂದಿದ್ದರೆ ಅದು 100 ಷೇರುಗಳಾಗುತ್ತದೆ.
ವಿಭಜನೆಯ ಮೊದಲು ನೆಸ್ಲೆ ಷೇರಿನ ಬೆಲೆ 27,11.40ರ ಮಟ್ಟದಲ್ಲಿತ್ತು. ಜನವರಿ 4 ರಂದು ಕಂಪನಿಯ ಷೇರುಗಳ ಮೌಲ್ಯ ಶೇ. 1.81 ರಷ್ಟು ಏರಿಕೆಯೊಂದಿಗೆ 52 ವಾರಗಳ ದಾಖಲೆಯ ಮಟ್ಟವನ್ನು ತಲುಪಿತ್ತು. ಆದ್ರೆ ಇಂದು ವಿಭಜನೆಯ ನಂತರ ಕಂಪನಿಯ ಷೇರುಗಳು ಶೇ.1.46 ರಷ್ಟು ಕುಸಿತದೊಂದಿಗೆ 2673.00ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.
ಅತ್ಯಂತ ದುಬಾರಿ ಷೇರುಗಳ ಪಟ್ಟಿ
ವಿಭಜನೆಗೂ ಮೊದಲು ನೆಸ್ಲೆ ಇಂಡಿಯಾ ಭಾರತದ ಅತ್ಯಂತ ದುಬಾರಿ ಷೇರುಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು. ನೆಸ್ಲೆ ಡಿಸೆಂಬರ್ 19 ರಂದು ಷೇರು ವಿಭಜನೆಯನ್ನು ಘೋಷಿಸಿತ್ತು. ಈ ಪ್ರಕಟಣೆಯ ನಂತರ ಕಂಪನಿಯ ಷೇರುಗಳು ಶೇ.5 ಕ್ಕಿಂತಲೂ ಹೆಚ್ಚು ಏರಿಕೆ ಕಂಡಿವೆ. MRF ಲಿಮಿಟೆಡ್ ಮೊದಲ ಸ್ಥಾನದಲ್ಲಿದ್ದರೆ, ಪೇಜ್ ಇಂಡಸ್ಟ್ರೀಸ್, ಹನಿವೆಲ್ ಆಟೋಮೇಷನ್, 3M ಇಂಡಿಯಾ ಮತ್ತು ಶ್ರೀ ಸಿಮೆಂಟ್ ನಂತರದ ಸ್ಥಾನದಲ್ಲಿವೆ. ಇವು ಭಾರತದ ಟಾಪ್ 5 ದುಬಾರಿ ಷೇರುಗಳು.