ಬೆಂಗಳೂರು: ರಾಜಧಾನಿ ಬೆಂಗಳೂರಿಗರಿಗೆ ಮತ್ತೊಂದ್ದು ಬೆಲೆ ಏರಿಕೆಯ ಬಿಸಿ ಶೀಘ್ರದಲ್ಲೇ ತಟ್ಟಲಿದೆ. ನಮ್ಮ ಮೆಟ್ರೋ ಪ್ರಯಾಣ ದರ ಏರಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.
ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣ, ಆತ್ಮಹತ್ಯೆ ಯತ್ನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್ ಡಿ (ಪ್ಲಾಟ್ ಫಾರಂ ಸ್ಕ್ರೀನ್) ಅಳವಡಿಕೆಗೆ ಬಿಎಂಆರ್ ಸಿ ಎಲ್ ಮುಂದಾಗಿದೆ. ಹೊಸ ಮಾರ್ಗಗಳಾದ ಗೊಟ್ಟಿಗೆರೆಯಿಂದ ನಾಗವಾರ (ಪಿಂಕ್ ಲೈನ್),ಸಿಲ್ಕ್ ಬೋರ್ಡ್ ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ ನಲ್ಲಿ ಪಿಎಸ್ ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಹೀಗಾಗಿ ಹಳೆಯ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ ಡಿ ಡೋರ್ ಅಳವಡಿಸಲು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಎಲ್ಲಾ ಮೆಟ್ರೋ ಸ್ಟೇಷನ್ ಗಳಿಗೂ ಪಿಎಸ್ ಡಿ ಡೋರ್ ಅಳವಡಿಕೆಗೆ 700-800 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸಲು ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.
ಆದರೆ ಮೆಟ್ರೋ ಪ್ರಯಾಣದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಪಡೆದು ಪಿಎಸ್ ಡಿ ಡೋರ್ ಅಳವಡಿಕೆ ಮಾಡಿ. ಅದನ್ನು ಬಿಟ್ಟು ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.