
ಬೆಂಗಳೂರು: ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ನಿಂತಲ್ಲೇ ನಿಂತಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕುವೆಂಪು ಮೆಟ್ರೋ ನಿಲ್ದಾಣದವರೆಗೆ ವಿದ್ಯುತ್ ಸಂಪರ್ಕದಲ್ಲಿ ತಾಂತ್ರಿಕ ಸಮಸ್ಯೆಯುಂಟಾಗಿದ್ದು, ಇದರಿಂದಾಗಿ ಹಸಿರು ಮಾರ್ಗದ ಮೆಟ್ರೋ ನಿಂತಲ್ಲೇ ನಿಲ್ಲುವಂತಾಗಿದೆ. ಇತರೆ ನಿಲ್ದಾಣಗಳಲ್ಲಿಯೂ ಮೆಟ್ರೋ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.
ಹಸಿರು ಮಾರ್ಗದಲ್ಲಿ ಮೆಟ್ರೋ ಇದ್ದಕ್ಕಿದ್ದಂತೆ ದಿಢೀರ್ ಸ್ಥಗಿತವಾಗಿದೆ. ಇದರಿಂದಾಗಿ ಸಾಯಂಕಾಲ 4:11ರಿಂದ ಹಸಿರು ಮಾರ್ಗದ ಮೆಟ್ರೋದಲ್ಲಿ ವ್ಯತ್ಯಯವಾಗಿದ್ದು, ತಾಂತ್ರಿಕ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಮೆಟ್ರೋ ಸಿಬ್ಬಂದಿಗಳು ಮುಂದಾಗಿದ್ದಾರೆ. ಏಕಾಏಕಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.