ಮುಂಬೈ: ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಬಿಗ್ ಕ್ಯಾಶ್ ಪೋಕರ್ ಮಾಲೀಕ ಅಂಕುರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಬಲಪಂಥೀಯ ಹಿಂದೂ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿಯು ಮುಂಬೈ ಪೊಲೀಸ್ ಕಮಿಷನರ್ ಮತ್ತು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ.
ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನ ಜಾಹೀರಾತಿನಲ್ಲಿ ಸಿದ್ದಿಕಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಹಾರಾಷ್ಟ್ರ ಪೊಲೀಸರ ಇಮೇಜ್‌ಗೆ ಕಳಂಕ ತರುತ್ತದೆ ಎಂದು ಆರೋಪಿಸಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ಸಾಮಾಜಿಕ ಕಲ್ಯಾಣ ಅಭಿಯಾನವಾದ ಸುರಾಜ್ಯ ಅಭಿಯಾನವು “ಪೊಲೀಸರ ಮಾನಹಾನಿ”ಗಾಗಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಮಹಾರಾಷ್ಟ್ರ ಪೊಲೀಸ್ ಸಮವಸ್ತ್ರ ಧರಿಸಿರುವ ಸಿದ್ದಿಕಿ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ‘ಬಿಗ್ ಕ್ಯಾಶ್ ಪೋಕರ್’ ಜಾಹೀರಾತಿನಲ್ಲಿ ಪೋಕರ್ ಆಡಲು ಜನರಿಗೆ ಕರೆ ನೀಡುತ್ತಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಲಾಗಿದೆ.