ಮೈಸೂರು: ಸಿಎಂ ಸಿದ್ದರಾಮಯ್ಯ ಸರ್ಕಾರ ಬಡವರ ಹೆಸರಲ್ಲಿ ಲೂಟಿ ಹೊಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೊಪ ಸಮಾವೇಶದಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಬಡವರಿಗೆ ನಿವೇಶನಗಳನ್ನು ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳೇ 14 ಸೈಟುಗಳನ್ನು ಹೊಡೆದಿದ್ದಾರೆ. ಮುಡಾ ಹಗರಣ ಹೊರಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನಿವೇಶನ ವಾಪಾಸ್ ತೆಗೆದುಕೊಳ್ಳಲಿ, 62 ಕೋಟಿ ರೂಪಾಯಿ ನಮಗೆ ಕೊಡಲಿ ಎಂದು ಕೇಳುತ್ತಿದ್ದಾರೆ. ಬಡವರಿಗೆ ನ್ಯಾಯ ಕೊಡಬೇಕಾದ ಸ್ಥಾನದಲ್ಲಿರುವ ಸಿಎಂ ಹಣ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಾಲ್ಮಿಕಿ ನಿಗಮದಲ್ಲಿ ಭ್ರಷ್ಟಾಚಾರ, ಮುಡಾದಲ್ಲಿ ಹಗರಣ ಹೀಗೆ ಸರ್ಕಾರ ಹಾಗೂ ಸಚಿವರು ಸಾಲು ಸಾಲು ಹಗರಣಗಳಲ್ಲಿ ಮುಳುಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಮುಡಾ ಹಗರಣದ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಸದನದಲ್ಲಿ ಸಿಎಂ ಉತ್ತರಿಸಿದ್ದರೆ ನಾವು ಪಾದಯಾತ್ರೆ ಬಗ್ಗೆ ಯೋಚಿಸುತ್ತಿರಲಿಲ್ಲ. ಆದರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸದೇ ಪಲಾಯನ ಮಾಡಿದ್ದಾರೆ. ಈಗ ಎಲ್ಲಿವರೆಗೂ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.