ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಖಾಸಗಿ ಶಾಲೆಯ ಕಟ್ಟಡವೊಂದರಲ್ಲಿ ಮದ್ಯದ ಬಾಟಲಿಗಳು ಮತ್ತು ಕಾಂಡೋಮ್ ಸಿಕ್ಕಿದ್ದು ಶಾಕ್ ನೀಡಿದೆ. ಮೇಲಾಧಿಕಾರಿಗಳು ಶನಿವಾರ ದಿಢೀರ್ ತಪಾಸಣೆ ನಡೆಸಿದಾಗ ಶಾಲಾ ಮುಖ್ಯಸ್ಥರ ಕೊಠಡಿಯಲ್ಲಿ ಮದ್ಯ, ಕಾಂಡೋಮ್‌ಗಳು ಸೇರಿದಂತೆ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ಸೀಲ್ ಹಾಕಲಾಗಿದೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ, ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಎ ಕೆ ಪಾಠಕ್ ಅವರೊಂದಿಗೆ ಸಾಮಾನ್ಯ ತಪಾಸಣೆಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಾಲೆಗೆ ಆಗಮಿಸಿದ್ದ ವೇಳೆ ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿದ್ದವು.
ಇಲ್ಲಿಂದ ವಶಪಡಿಸಿಕೊಂಡಿರುವ ಅಪಾರ ಪ್ರಮಾಣದ ಮದ್ಯ ನಮಗೆ ಅಚ್ಚರಿ ಮೂಡಿಸಿದೆ ಎಂದು ನಿವೇದಿತಾ ಶರ್ಮಾ ಹೇಳಿದರು. ಶಾಲಾ ಆವರಣದಲ್ಲಿ ಮದ್ಯಕ್ಕೆ ಅವಕಾಶವಿಲ್ಲ. ಇದು ಕಾನೂನು ಉಲ್ಲಂಘನೆಯಾಗಿದೆ. ಇಷ್ಟೊಂದು ಪ್ರಮಾಣದ ಮದ್ಯವನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಇದು ಕಾನೂನು ಬಾಹಿರವಾಗಿರುವುದರಿಂದ ಈ ಬಗ್ಗೆ ಇಲಾಖೆ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದರು.
ಪ್ರಾಂಶುಪಾಲರು ಮತ್ತು ಶಾಲಾ ವ್ಯವಸ್ಥಾಪಕರ ಕೊಠಡಿಗಳು ಮಕ್ಕಳ ತರಗತಿಗಳಿಗೆ ಜೋಡಿಸಲ್ಪಟ್ಟಿರುವುದಕ್ಕೆ ತನಿಖಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಮತ್ತು ಮದ್ಯದ ಬಾಟಲಿಗಳು ಸೇರಿದಂತೆ ಇತರ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರೋದ್ರಿಂದ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ.
ಆದರೆ ಶಾಲೆಯ ಪ್ರಾಂಶುಪಾಲರು ಆರೋಪವನ್ನು ತಳ್ಳಿಹಾಕಿದ್ದಾರೆ. ವಸತಿ ಪ್ರದೇಶವು ಕ್ಯಾಂಪಸ್‌ನಿಂದ ಹೊರಗಿದೆ. ಖಾಲಿ ಬಾಟಲಿಗಳು ಮತ್ತು ಎರಡು ಬಾಟಲಿಗಳಲ್ಲಿ ಮದ್ಯ ತುಂಬಿರಬಹುದು. ನಾವು ಮದ್ಯ ಸೇವಿಸುವ ಜನರಲ್ಲ ಎಂದು ಹೇಳಿದ್ದಾರೆ.