ಬೆಂಗಳೂರು: ವಾಡಿಗೆಗಿಂತ ಎರಡು ದಿನ ಮೊದಲೇ ಕೇರಳಕ್ಕೆ ಪ್ರವೇಶಿಸಿದ ನೈರುತ್ಯ ಮುಂಗಾರು ಜೂನ್ 2ರಂದು ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಅವರು, ಮೇ 30ರಂದು ವಾಡಿಕೆಗಿಂತ ಎರಡು ದಿನ ಮೊದಲು ಕೇರಳಕ್ಕೆ ಮುಂಗಾರು ಆಗಮನವಾಗಿದೆ. ಜೂನ್ 2ರಂದು ಕರ್ನಾಟಕದ ಕರಾವಳಿಗೆ ಮಾನ್ಸೂನ್ ಆಗಮಿಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಸೃಷ್ಟಿಯಾಗಿದ್ದ ಎಲ್ ನಿನೋ ಮುಂಗಾರಿನ ಮೇಲೆ ಪರಿಣಾಮ ಬೀರಿದ ಕಾರಣ ಮಳೆ ಕೊರತೆಯಾಗಿತ್ತು. ಈಗಾಗಲೇ ದುರ್ಬಲಗೊಂಡ ಎಲ್ ನಿನೋ ಶೂನ್ಯ ಹಂತಕ್ಕೆ ಬಂದಿದೆ. ಜುಲೈ ಮೊದಲ ವಾರದಲ್ಲಿ ಲಾ ನಿನಾ ಉಂಟಾಗಲಿದ್ದು, ಇದರಿಂದ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.