ಪ್ರಸ್ತುತ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇದರಿಂದ ಬೆಳೆ ನಷ್ಟದ ಜೊತೆಗೆ ಜೀವ ಹಾನಿಯೂ ಸಂಭವಿಸಿದೆ. ಇದೇ ರೀತಿ ಹಾವೇರಿ ಜಿಲ್ಲೆಯಲ್ಲೂ ನಿರಂತರ ಮಳೆ ಸುರಿಯುತ್ತಿದ್ದು, ಇಷ್ಟಾದರೂ ಸಹ ತಮ್ಮ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿಯವರು ಸ್ಥಳಕ್ಕೆ ಭೇಟಿ ನೀಡಿ ನೊಂದವರ ಅಳಲು ಆಲಿಸಿಲ್ಲ ಎಂದು ಆಕ್ರೋಶಗೊಂಡಿರುವ ಅಲ್ಲಿನ ಮತದಾರರು ವಿನೂತನವಾಗಿ ಅವರ ಗಮನ ಸೆಳೆಯಲು ಮುಂದಾಗಿದ್ದಾರೆ.
ಹೌದು, ವಿಧಾನಸಭೆ ಉಪ ಸಭಾಪತಿಯೂ ಆಗಿರುವ ರುದ್ರಪ್ಪ ಲಮಾಣಿ ಅವರು ಹಾವೇರಿಯತ್ತ ಬರದೆ, ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿದ್ದಾರೆ. ಅಕಾಲಿಕ ಮಳೆಯಿಂದ ಕ್ಷೇತ್ರದಲ್ಲಿ ಅಪಾರ ಹಾನಿಯಾಗಿದ್ದು ಜೊತೆಗೆ ಕಾಲುವೆ ನೀರಿನಲ್ಲಿ ಬಾಲಕನೊಬ್ಬ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಇಷ್ಟಾದರೂ ರುದ್ರಪ್ಪ ಲಮಾಣಿ ಬೆಂಗಳೂರು ಬಿಟ್ಟು ಹಾವೇರಿಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ಅವರ ಹೆಸರಿನಲ್ಲಿ ರೈಲು ಟಿಕೆಟ್ ಕಾಯ್ದಿರಿಸಲಾಗಿದೆ.
ಬೆಂಗಳೂರಿನಿಂದ ಹಾವೇರಿಗೆ ಬರುವ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಅಕ್ಟೋಬರ್ 25ರಂದು ರುದ್ರಪ್ಪ ಲಮಾಣಿ ಅವರ ಹೆಸರಿನಲ್ಲಿ ಸಿಎನ್ಎಫ್ ಡಿ 9 ಬೋಗಿಯಲ್ಲಿ 37ನೇ ಸೀಟ್ ಕಾಯ್ದಿರಿಸಲಾಗಿದ್ದು, ರುದ್ರಪ್ಪ ಲಮಾಣಿ ಅವರ ಮೊಬೈಲ್ ವಾಟ್ಸಾಪ್ ಗೆ ಟಿಕೆಟ್ ನ ಸ್ಕ್ರೀನ್ ಶಾಟ್ ಕಳುಹಿಸಲಾಗಿದೆ.
ಅಲ್ಲದೆ ಸನ್ಮಾನ್ಯ ಶಾಸಕರಿಗೆ ದುಡ್ಡಿನ ಅಭಾವ ಎಂದು ತಿಳಿದು ಬಂದಿದೆ ಹೀಗಾಗಿ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಅವರಿಗೆ ರೈಲು ಟಿಕೆಟ್ ಕಾಯ್ದಿರಿಸಲಾಗಿದ್ದು, ಇಲ್ಲಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಬಳಿಕ ಅವರಿಗೆ ವಾಪಸ್ ಹೋಗಲು ಮತ್ತೆ ಟಿಕೆಟ್ ಮಾಡಿಸುತ್ತೇವೆ ಎಂದು ರುದ್ರಪ್ಪ ಲಮಾಣಿ ಅವರ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದ ಟಿಕೆಟ್ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗ ವೈರಲ್ ಆಗಿದೆ.