ಮುಂಬೈ: ಮೀರಾ ಭಾಯಂದರ್-ವಸಾಯಿ ವಿರಾರ್(MBVV) ಪೊಲೀಸ್ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕ(AHTU) ಭಾಯಂದರ್ ನಲ್ಲಿ 26 ವರ್ಷದ ಮಹಿಳೆಯನ್ನು ಬಂಧಿಸುವ ಮೂಲಕ ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿದ್ದಾರೆ.
ಅಪ್ರಾಪ್ತ ಬಾಲಕಿಯರನ್ನು ಮಾಂಸದ ವ್ಯಾಪಾರ ಚಟುವಟಿಕೆಗಳಿಗೆ ಒತ್ತಾಯಿಸಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. ಕಿಡಿಗೇಡಿಗಳು ಅಪ್ರಾಪ್ತ ಬಾಲಕಿಯರನ್ನು ಅನೈತಿಕ ಚಟುವಟಿಕೆಗಳಿಗೆ ಬಲವಂತಪಡಿಸುವ ಸುಳಿವಿನ ಮೇರೆಗೆ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸಮೀರ್ ಅಹಿರಾವ್ ಅವರ ನೇತೃತ್ವದಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಉಮೇಶ್ ಪಾಟೀಲ್ ನೇತೃತ್ವದ ತಂಡ ಗ್ರಾಹಕರ ಸೋಗಿನಲ್ಲಿ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದೆ.
ಶುಕ್ರವಾರ ಮಧ್ಯಾಹ್ನ ಭಾಯಂದರ್(ಪೂರ್ವ) ದ ನ್ಯೂ ಗೋಲ್ಡನ್ ನೆಸ್ಟ್ ಪ್ರದೇಶದಲ್ಲಿರುವ ಉಪಾಹಾರ ಗೃಹದಲ್ಲಿ ಬಲೆ ಹಾಕಲಾಯಿತು. ನೀಲಂ ಸಂಶಿ ಅಲಿಯಾಸ್ ಜಸ್ಪ್ರೀತ್ ಎಂದು ಗುರುತಿಸಲಾದ ಮಹಿಳೆ ಇಬ್ಬರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯೊಂದಿಗೆ ಸ್ಥಳಕ್ಕೆ ಬಂದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.
ಪೊಲೀಸ್ ತಂಡವು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಜಸ್ಪ್ರೀತ್ ರನ್ನು ಬಂಧಿಸಿದೆ. ಪೋಕ್ಸೋ ಸೇರಿ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಲಾಗಿದೆ. ರಕ್ಷಿಸಿದ ಮಹಿಳೆಯರು ಮತ್ತು ಬಾಲಕಿಯನ್ನು ಸುರಕ್ಷಿತವಾಗಿ ಪುನರ್ವಸತಿ ಮನೆಗೆ ಕಳುಹಿಸಲಾಗಿದೆ. ನವಘರ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.