ಬೆಂಗಳೂರು: ಕಲ್ಲು ಗಣಿಗಾರಿಕೆ ಕಾನೂನು ತೊಡಕುಗಳನ್ನು ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಭಾರತೀಯ ಗ್ರಾನೆಟ್ ಮತ್ತು ಗಣಿ ಉದ್ಯಮದ ಒಕ್ಕೂಟದಿಂದ ನಡೆದ ‘ಸ್ಟೋನಾ -2023’ 15ನೇ ಅಂತರರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತು ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ಗಣಿಗಾರಿಕೆ ಉದ್ಯಮ ಬೆಳೆಸಲು ಬದ್ಧವಾಗಿದ್ದು, ಪರವಾನಿಗೆ, ನವೀಕರಣ ಪ್ರಕ್ರಿಯೆ ಸರ್ಕಾರಿ ನೀತಿಗಳನ್ನು ಸರಳೀಕರಣ ಮಾಡಲಾಗುವುದು. ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲಾಗುವುದು. ಅನಗತ್ಯ ಕಿರುಕುಳ ತಪ್ಪಿಸಲಾಗುವುದು. ಕ್ಲಿಷ್ಟ ಕಾನೂನು ವಿಧಾನಗಳನ್ನು ತೆಗೆದುಹಾಕಿ ಪಾರದರ್ಶಕತೆ ಮತ್ತು ದಕ್ಷತೆಯಿಂದ ಗಣಿ ಉದ್ಯಮ ನಡೆಸಲು ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
ವಿಶ್ವದಲ್ಲಿಯೇ ಅತ್ಯುತ್ತಮ ಕಬ್ಬಿಣದ ಅದಿರು ನಮ್ಮಲ್ಲಿ ಲಭ್ಯವಿದ್ದು, ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಾಯ್ದುಕೊಳ್ಳಬೇಕು. ಅಕ್ರಮ, ಮಿತಿಯಿಲ್ಲದ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಸುಸ್ಥಿರ ಗಣಿಗಾರಿಕೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಅವೈಜ್ಞಾನಿಕ ಗಣಿಗಾರಿಕೆಯಿಂದ ಪ್ರಕೃತಿಯ ಸಂಪನ್ಮೂಲ ನಷ್ಟವಾಗುತ್ತದೆ. ಆರ್ಥಿಕ ಹೊರೆಯಾಗುತ್ತದೆ. ಉದ್ಯಮಿಗಳು ಈ ಬಗ್ಗೆ ಜವಾಬ್ದಾರಿ ವಹಿಸಬೇಕು. ಆಧುನಿಕ ತಂತ್ರಜ್ಞಾನ ಯಂತ್ರೋಪಕರಣ ಬಳಸಿಕೊಂಡು ಉದ್ಯಮ ಮುನ್ನಡೆಸಬೇಕು ಎಂದು ತಿಳಿಸಿದ್ದಾರೆ.