ಮಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಹೊರವಲಯದ ಮೇರಿಹಿಲ್ ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಾನು ಹಣಕಾಸು ಸಚಿವನಾಗಿದ್ದಾಗ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ತೀರ್ಮಾನ ಕೈಗೊಂಡಿದ್ದೆ. ಆದರೆ ಇಂದಿಗೂ ದಕ್ಷಿಣ ಕನ್ನಡ, ಉಡುಪಿ ಸೇರಿ ಅನೇಕ ಜಿಲ್ಲೆಗಳಲ್ಲಿ ಅವುಗಳನ್ನು ಮಾಡಿಲ್ಲ. ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಆಗಬೇಕಿದೆ. ಇದರಿಂದ ಬಡವರು, ಗ್ರಾಮೀಣ ಮಕ್ಕಳು ಕೂಡ ವೈದ್ಯರಾಗಬಹುದಾಗಿದೆ. ಬಡತನ ಗೊತ್ತಿದ್ದವರಿಗೆ ಬಡವರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಸಿಎಂ ಹೇಳಿದ್ದಾರೆ.
ಅತಿ ದೊಡ್ಡ ಆರೋಗ್ಯ ವಿವಿ ಎನ್ನುವ ಹೆಗ್ಗಳಿಕೆಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಹೊಂದಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಜಯದೇವ ಆಸ್ಪತ್ರೆ, ನೆಫ್ರಾಲಜಿ ಇನ್ಸ್ಟಿಟ್ಯೂಟ್ ಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವಂತೆ ಎಪಿಎಲ್ ಕಾರ್ಡ್ ದಾರರಿಗೆ ಅವರ ಜೀವನ ಮಟ್ಟಕ್ಕೆ ತಕ್ಕಂತೆ ಬಿಲ್ ಹೊಂದಾಣಿಕೆ ಮಾಡಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.