ಆಹಾರ ಸೇವಿಸುತ್ತಿದ್ದ ವೇಳೆ ವ್ಯಕ್ತಿಯ ಸಣ್ಣಕರುಳು ದೇಹದಿಂದ ಹೊರಗೆ ಜಾರಿರುವ ಅಪರೂಪದ ಅಚ್ಚರಿಯ ಘಟನೆ ಫ್ಲೋರಿಡಾದಲ್ಲಿ ವರದಿಯಾಗಿದೆ. ತನ್ನ ಪತ್ನಿಯೊಂದಿಗೆ ಉಪಾಹಾರ ಸೇವಿಸುತ್ತಿದ್ದಾಗ ಕೆಮ್ಮು ಮತ್ತು ಸೀನಿದಾಗ ವ್ಯಕ್ತಿಯೊಬ್ಬನ ದೇಹದಿಂದ ಕರುಳು ಹೊರಬಿದ್ದಿದೆ. ಫ್ಲೋರಿಡಾದ 63 ವರ್ಷದ ವ್ಯಕ್ತಿಯ ಕರುಳಿನ ಭಾಗ ದೇಹದಿಂದ ಹೊರಬಿದ್ದಿರುವುದು ಅಚ್ಚರಿ ತಂದಿದೆ
ಊಟ ಮಾಡುತ್ತಿದ್ದ ವೇಳೆ ವ್ಯಕ್ತಿಗೆ ತೇವದ ಅನುಭವವಾಗಿದ್ದು ತೀವ್ರತರವಾದ ನೋವನ್ನು ಅನುಭವಿಸಿದ್ದಾರೆ. ಬಳಿಕ ಅವರ ಶರ್ಟ್ ಎತ್ತಿ ನೋಡಿದಾಗ ಶಸ್ತ್ರಚಿಕಿತ್ಸಾ ಗಾಯದಿಂದ ಅವರ ಕರುಳಿನ ಕೆಲ ಇಂಚಿನಷ್ಟು ಭಾಗ ಹೊರಗೆ ಬಂದಿರುವುದು ಗೊತ್ತಾಗಿದೆ.
ಘಟನೆಯ ಎರಡು ವಾರಗಳ ಮೊದಲು ಈ ಹಿಂದಿನ ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಿಂದ ಉಂಟಾಗುವ ತೊಂದರೆಗಳಿಂದಾಗಿ ಫ್ಲೋರಿಡಾದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಶಸ್ತ್ರಚಿಕಿತ್ಸೆಯು ಸಿಸ್ಟೆಕ್ಟಮಿಯನ್ನು ಒಳಗೊಂಡಿತ್ತು. ಅಂದರೆ ಮೂತ್ರಕೋಶವನ್ನು ತೆಗೆಯುವಂತಹ ಶಸ್ತ್ರ ಚಿಕಿತ್ಸೆ. ಈ ಯಶಸ್ವಿ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ರೋಗಿಯನ್ನು ಡಿಸ್ಚಾರ್ಜ್ ಮಾಡಿದ್ದರು.
ಬಳಿಕ ರೋಗಿಯ ಗಾಯವನ್ನು ಪರೀಕ್ಷಿಸಿ ಶಸ್ರ್ಗಚಿಕಿತ್ಸೆಯ ಹೊಲಿಗೆಯನ್ನು ತೆಗೆದುಹಾಕಲಾಯಿತು. ಬಳಿಕ ರೋಗಿ ತನ್ನ ಪತ್ನಿಯೊಂದಿಗೆ ಉಪಹಾರಕ್ಕೆ ಹೋಗಿದ್ದು ಕೆಮ್ಮಿದಾಗ ಕರುಳಿನ ಭಾಗ ಹೊರಕ್ಕೆ ಬಂದಿದೆ. ಇದರಿಂದ ಗಾಬರಿಗೊಂಡು ದೇಹದ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದೆಂದು ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ. ಬಳಿಕ ವೈದ್ಯರು ಕರುಳನ್ನು ಮತ್ತೆ ಹೊಟ್ಟೆಯೊಳಕ್ಕೆ ಸೇರಿಸಿದ್ದಾರೆ.
ಆರು ದಿನಗಳ ನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು ನಂತರ ಯಾವುದೇ ಹೆಚ್ಚಿನ ತೊಂದರೆಗಳನ್ನು ಅನುಭವಿಸಲಿಲ್ಲ ಎಂಬುದು ವರದಿಯಾಗಿದೆ.
ರೋಗಿಯ ಈ ಪ್ರಕರಣವು ಅಮೆರಿಕನ್ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್ ನಲ್ಲಿ ವರದಿಯಾಗಿದೆ.