ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸರ್ಕಾರಿ ಕಾಲೇಜಿನ ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆಸಿಡ್ ದಾಳಿ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಕೇರಳ ಮೂಲದ ಮತ್ತಿಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಅಭಿನ್ ಗೆ ಆಸಿಡ್ ತಂದುಕೊಟ್ಟ ವ್ಯಕ್ತಿಯನ್ನು ಹಾಗೂ ಆಸಿಡ್ ದಾಳಿ ನಡೆಸಿದ ದಿನ ಕಾಲೇಜಿನ ಸಮವಸ್ತ್ರ ಹೋಲುವ ಡ್ರೆಸ್ ನ್ನು ಹೊಲಿದು ಕೊಟ್ಟ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಾರ್ಚ್ 5ರಂದು ಕಡಬ ಸರ್ಕಾರಿ ಕಾಲೇಜಿನ ಆವರಣದಲ್ಲಿ ದುಷ್ಕರ್ಮಿ, ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆಸಿದ್ದ. ಓರ್ವ ಯುವತಿಯ ಮುಖಕ್ಕೆ ಆಸಿಡ್ ಎರಚಲು ಹೋಗಿ ಆಕೆಯ ಪಕ್ಕದಲ್ಲಿ ನಿಂತಿದ್ದ ಇನ್ನಿಬ್ಬರು ವಿದ್ಯಾರ್ಥಿಗಳಿಗೂ ಆಸಿಡ್ ತಾಗಿ ಗಾಯಗಳಾಗಿತ್ತು. ಓರ್ವ ಯುವತಿಯ ಮುಖಕ್ಕೆ ಗಂಭೀರವಾದ ಸುಟ್ಟಗಾಯಗಳಾದ್ದು, ಮೂವರನ್ನು ಮಂಗಳೂರು ಆಸ್ಪತ್ರೆಗೆದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.